ಜಗಳೂರು, ಏ.5 – ದೇಶಕ್ಕೆ ಹಸಿರು ಕ್ರಾಂತಿಯ ಹರಿಕಾರ ಮಾಜಿ ಪ್ರಧಾನಿ ಡಾ|| ಬಾಬು ಜಗಜೀವನ್ರಾಮ್ ಅವರ ಕೊಡುಗೆ ಅಪಾರವಾಗಿದೆ ಎಂದು ಶಾಸಕರು ಹಾಗೂ ಎಸ್ಟಿ ಅಭಿವೃದ್ದಿ ನಿಗಮದ ಅಧ್ಯಕ್ಷ ಎಸ್.ವಿ.ರಾಮಚಂದ್ರ ಹೇಳಿದರು.
ತಾಲ್ಲೂಕು ಕಚೇರಿ ಆವರಣದಲ್ಲಿ ಇಂದು ಏರ್ಪಾಡಾಗಿದ್ದ ಡಾ|| ಬಾಬು ಜಗಜೀವನ್ರಾಮ್ರವರ 114 ನೇ ಜಯಂತಿ ಕಾರ್ಯಕ್ರಮದಲ್ಲಿ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.
ಡಾ|| ಬಾಬು ಜಗಜೀವನ್ರಾಮ್ ಅವರು ದೀನ, ದಲಿತರ ಏಳಿಗೆಗಾಗಿ ಶ್ರಮಿಸಿದ್ದಾರೆ. ಈ ದೇಶದ ಪ್ರಗತಿಗಾಗಿ ದುಡಿದಿದ್ದಾರೆ. ಇಂತಹ ಆದರ್ಶ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕಿದೆ ಎಂದರು.
ಏಪ್ರಿಲ್ 14 ನೇ ತಾರೀಖು ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿಯಂದು ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಅವರ ಪುತ್ಥಳಿ ನಿರ್ಮಾಣದ ಶಂಕುಸ್ಥಾಪನೆಗೆ ಕೈ ಗೊಳ್ಳುವುದಾಗಿ ಭರವಸೆಯನ್ನು ನೀಡಿದ ಶಾಸಕರು, ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅತೀ ಬೇಗ ಪೂರ್ಣಗೊಳಿ ಸುವ ಸತತ ಪ್ರಯತ್ನದಲ್ಲಿದ್ದೇನೆ.
ಭದ್ರಾ ಮೇಲ್ದಂಡೆ ಶಂಕುಸ್ಥಾಪನೆಗೆ ಪ್ರಧಾನಿಯವರಿಗೂ ಆಹ್ವಾನ ನೀಡಿ ಅವರ ಸಮ್ಮುಖದಲ್ಲಿ ನೆರೆವೇರಿಸಲಾಗುವುದು ಎಂದರು.
ತಾಲ್ಲೂಕು ಡಿ.ಎಸ್.ಎಸ್. ಅಧ್ಯಕ್ಷ ಸತೀಶ್ ಮಾತನಾಡಿ, ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಜಯಂತಿಯನ್ನು ವಿಜೃಂಭಣೆಯಿಂದ ಆಚರಿಸಲು ಅವಕಾಶ ಕಲ್ಪಿಸಿಕೊಡಬೇಕೆಂದು ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಈ.ಒ. ಮಲ್ಲಾನಾಯ್ಕ್, ತಹಶೀಲ್ದಾರ್ ನಾಗವೇಣಿ, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಬಿ. ಮಹೇಶ್ ತಾಲ್ಲೂಕಿನ ವಿವಿಧ ಇಲಾಖೆ ಅನುಷ್ಠಾನ ಅಧಿಕಾರಿಗಳು ಸೇರಿದಂತೆ ಸಮಾಜದ ಎಲ್ಲಾ ಮುಖಂಡರು, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.