ದಾವಣಗೆರೆ, ಜ.11- ಮೆಕ್ಕೆಜೋಳದ ಬೆಳೆಗಾರರಿಗೆ ಸಾಲ ಮನ್ನಾ ಮಾಡಬೇಕು ಹಾಗೂ ಮಹಾರಾಷ್ಟ್ರ ಸರ್ಕಾರ ನೀಡಿದಂತೆ ಹೆಚ್ಚುವರಿ ಪರಿಹಾರ ನೀಡಬೇಕೆಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಸಂಸದರ ಕಚೇರಿ ಮುಂಭಾಗದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು. ನಂತರ ಸಂಸದ ಜಿ.ಎಂ. ಸಿದ್ದೇಶ್ವರ ಮುಖಾಂತರ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಮೆಕ್ಕೆಜೋಳ ಪ್ರತಿ ಕ್ವಿಂಟಾಲ್ ಗೆ 1850 ರೂ. ನಿಗದಿ ಮಾಡಿದ್ದು, ಮಾರುಕಟ್ಟೆಯಲ್ಲಿ 1,100 ರಿಂದ 1250 ರೂ.ವರೆಗೆ ಮಾರಾಟವಾಗಿದೆ. ರೈತರಿಗೆ ಪ್ರತಿ ಕ್ವಿಂಟಾಲ್ ಗೆ 700 ರಿಂದ 750 ರೂ. ನಷ್ಟವಾಗಿದ್ದು, ಮಹಾರಾಷ್ಟ್ರ ಸರ್ಕಾರ ಮೆಕ್ಕೆಜೋಳ ಬೆಳೆಗಾರರಿಗೆ 700 ರೂ. ಪ್ರೋತ್ಸಾಹ ಧನ ನೀಡಿದ್ದು, ಅದರಂತೆಯೇ ಕರ್ನಾಟಕ ಸರ್ಕಾರವು ರಾಜ್ಯದ ರೈತರಿಗೆ ಪ್ರೋತ್ಸಾಹ ಧನ ನೀಡಬೇಕು. ಮೆಕ್ಕೆಜೋಳ ಬೆಳೆಗಾರರ ಸಾಲ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದರು.
ಆರ್ಥಿಕ ಬರಗಾಲದಲ್ಲಿ ರುವುದರಿಂದ ದೇಶದ ಜನ ತುಂಬಾ ದುಃಖ ಪಡುತ್ತಿದ್ದು, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪದೇ ಪದೇ ಏರಿಸುವುದಕ್ಕಿಂತ ಒಂದೇ ಬಾರಿಗೆ 100 ರೂ. ಮಾಡಿದರೆ ಒಳಿತು ಎಂದು ಮನವಿ ಮಾಡಿದರು.
ಪ್ರತಿಭಟನೆಯಲ್ಲಿ ಸಂಘ ಟನೆಯ ರಾಜ್ಯ ಕಾರ್ಯದರ್ಶಿ ಬಲ್ಲೂರು ರವಿಕುಮಾರ್, ಜಿಲ್ಲಾಧ್ಯಕ್ಷ ಕಬ್ಬಳ ಪ್ರಸಾದ್, ಆವರಗೆರೆ ಇಟಗಿ ಬಸವರಾಜಪ್ಪ, ಲಿಂಗರಾಜ ಪಾಮೇನಹಳ್ಳಿ, ಆರ್.ಜಿ. ಬಸವರಾಜ ರಾಂಪುರ, ಗೆದ್ಲಹಟ್ಟಿ ಹನುಮಂತಪ್ಪ, ಮಾಯಕೊಂಡ ಗೌಡ್ರ ಅಶೋಕ, ಆಲೂರು ಪರಮೇಶ್ವರಪ್ಪ, ಆಲೂರು ಮಂಜಪ್ಪ ಸೇರಿದಂತೆ ಇತರರು ಪಾಲ್ಗೊಂಡಿದ್ದರು.