ದಾವಣಗೆರೆ, ಜ.4- ಕಾಲೇಜಿನ ನೆಚ್ಚಿನ ಉಪನ್ಯಾಸಕಿಯನ್ನು ಕೆಲಸದಿಂದ ತೆಗೆದು ಹಾಕಿರುವುದಕ್ಕೆ ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ಆ ಉಪನ್ಯಾಸಕಿಯನ್ನು ಪುನಃ ಕೆಲಸಕ್ಕೆ ಸೇರಿಸಿಕೊಳ್ಳುವಂತೆ ಆಡಳಿತ ಮಂಡಳಿಗೆ ಆಗ್ರಹಿಸಿ ಪ್ರತಿಭಟನೆ ನಡೆಸಿರುವ ಘಟನೆ ಇಲ್ಲಿನ ಬಾಡಾ ಕ್ರಾಸ್‍ನಲ್ಲಿನ ಜೈನ್ ಕಾಲೇಜಿನಲ್ಲಿ ಇಂದು ನಡೆಯಿತು.
ಕೊರೊನಾದಿಂದ ದೂರ ಉಳಿದಿದ್ದ ಕಾಲೇಜು ವಿದ್ಯಾರ್ಥಿಗಳು ಹೊಸ ವರ್ಷಕ್ಕೆ ಕಾಲೇಜು ಆರಂಭವಾದಾಗ ಅವರ ನೆಚ್ಚಿನ ಅತಿಥಿ ಉಪನ್ಯಾಸಕರಾದ ಶಶಿಕಲಾ ಅವರನ್ನು ಕೆಲಸದಿಂದ ಆಡಳಿತ ಮಂಡಳಿ ತೆಗೆದು ಹಾಕಿದ ವಿಚಾರ ತಿಳಿದ ವಿದ್ಯಾರ್ಥಿಗಳು, ಶಶಿಕಲಾ ಅವರಿಗಾಗಿ ಹೋರಾಟ ನಡೆಸಿ, ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಶಶಿಕಲಾ ಸರಿಯಾಗಿ ಕಾರ್ಯ ನಿರ್ವಹಿಸುತ್ತಿರಲಿಲ್ಲ. ಕಾಲೇಜ್‍ನ ಕೆಲ ವಿದ್ಯಾರ್ಥಿಗಳು ಅವರ ವಿರುದ್ದ ದೂರು ನೀಡಿದ್ದರು. ಅವರು ಪಾಠ ಕೇಳುತಿದ್ದ ವಿದ್ಯಾರ್ಥಿಗಳ ಗುಣಮಟ್ಟ ಕಡಿಮೆಯಾಗಿತ್ತು. ಹೀಗಾಗಿ, ಉಪನ್ಯಾಸಕಿಯನ್ನು ಕೆಲಸದಿಂದ ರಿಲೀವ್ ಮಾಡಲಾಗಿದೆ ಎಂಬುದಾಗಿ ಜೈನ್ ಕಾಲೇಜಿನ ಪ್ರಾಂಶುಪಾಲ ಸದಾನಂದ ತಿಳಿಸಿದ್ದರು. ಈ ಉತ್ತರದಿಂದ ವಿದ್ಯಾರ್ಥಿಗಳು ಮತ್ತಷ್ಟು ಆಕ್ರೋಶಗೊಂಡು, ಆಡಳಿತ ಮಂಡಳಿ ನಿರ್ದೇಶಕಿ ನಿಖಿತಾ, ಪ್ರಾಂಶುಪಾಲ ಸದಾನಂದ ವಿರುದ್ಧ ವಾಗ್ವಾದಕ್ಕಿಳಿದರು.
ಶಶಿಕಲಾ ಅವರನ್ನು ಡಿಸೆಂಬರ್ 30ರಂದು ರಿಲೀವ್ ಮಾಡಲಾಗಿದೆ. ಕಾರಣವಿಲ್ಲದೇ ಉಪನ್ಯಾಸಕಿ ಶಶಿಕಲಾ ಅವರನ್ನು ಕೆಲಸದಿಂದ ವಜಾಗೊಳಿಸಲಾಗಿದೆ. ಇದನ್ನು ನೋಡಿದರೆ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರ ಕುತಂತ್ರ ಎಂದು ವಿದ್ಯಾರ್ಥಿಗಳು ದೂರಿದರು. ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ವಿದ್ಯಾನಗರ ಪೊಲೀಸರು ವಿದ್ಯಾರ್ಥಿಗಳು ಮತ್ತು ಆಡಳಿತ ಮಂಡಳಿಯವರನ್ನು ಠಾಣೆಗೆ ಕರೆದು ವಿಚಾರಣೆ ನಡೆಸುತ್ತಿದ್ದಾರೆ.
ಇತ್ತೀಚೆಗಷ್ಟೇ ಇದೇ ವಿಚಾರವಾಗಿ ಪ್ರತಿಭಟಿಸಿದ್ದ ವಿದ್ಯಾರ್ಥಿ ಗಳು, ಉಪನ್ಯಾಸಕರಾದ ಶಶಿಕಲಾ ಅವರನ್ನು ಪುನಃ ಸೇರಿಸಿ ಕೊಳ್ಳುವಂತೆ ಕಾಲೇಜು ಆಡಳಿತ ಮಂಡಳಿಗೆ ಒತ್ತಾಯಿಸಿದ್ದರು.