ಆರ್ಥಿಕ ಬಿಕ್ಕಟ್ಟು ಮೆಟ್ಟಿ ನಿಂತ ಆರ್ಥಿಕ ತಜ್ಞ ಅಸ್ತಂಗತ: ವಿನಯ್ ಕುಮಾರ್ ಸಂತಾಪ

ದಾವಣಗೆರೆ,ಡಿ. 27- ಭಾರತ ದೇಶದ ಎರಡು ಬಾರಿ ಪ್ರಧಾನಿಯಾಗಿದ್ದ ಡಾ. ಮನಮೋಹನ್ ಸಿಂಗ್ ಕೊಡುಗೆ ಅಪಾರ. ಹತ್ತು ವರ್ಷಗಳ ಅಧಿಕಾರಾವಧಿ ಯಲ್ಲಿ ಮಹಾಮೌನಿಯಾಗಿ ಮಾಡಿದ ಅಭಿವೃದ್ಧಿ ಕಾರ್ಯಗಳು, ಕೈಗೊಂಡ ಯೋಜ ನೆಗಳು ಮನಮೋಹನ್ ಸಿಂಗ್ ಅವರ ದೂರದೃಷ್ಟಿತ್ವಕ್ಕೆ ಸಾಕ್ಷಿ ಎಂದು ಸ್ವಾಭಿಮಾನಿ ಬಳಗದ ಸಂಸ್ಥಾಪಕ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ಹೇಳಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು, ಮನಮೋಹನ್ ಸಿಂಗ್ ಅವರು ಗ್ರಾಮೀ ಣಾಭಿವೃದ್ಧಿ ಕೈಗೊಂಡ ಕಾರ್ಯಗಳು ಅಪಾರ. ಪೊಲೀಯೋ ಸಂಪೂರ್ಣ ನಿರ್ಮೂಲನೆ ಆಗಿದ್ದೇ ಈ ಕಾಲದಲ್ಲಿ. ಬಾಲ್ಯ ವಿವಾಹ ನಿಷೇಧ ಕಾಯ್ದೆ, ಅರಣ್ಯ ರಕ್ಷಣೆ ಹಕ್ಕು ಕಾಯ್ದೆ, ಮಹಾತ್ಮಾಗಾಂಧಿ ಗ್ರಾಮೀಣ ಯೋಜನೆ, ಮಾಹಿತಿ ಹಕ್ಕು ಕಾಯ್ದೆ, ಅಮೆರಿಕಾ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವ ಮೂಲಕ ಭಾರತದ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಮಹಾನ್ ನಾಯಕ ಎಂದು ಸಂತಾಪ ಸೂಚಕ ಸಂದೇಶದಲ್ಲಿ ತಿಳಿಸಿದ್ದಾರೆ.

ದೇಶದ 60 ಸಾವಿರ ಕೋಟಿ ರೈತರ ಸಾಲ ಮನ್ನಾ ಮಾಡುವ ಮೂಲಕ ರೈತರ ಪಾಲಿನ ಆಶಾಕಿರಣವಾಗಿದ್ದರು. ಮಹಾತ್ಮಾಗಾಂಧಿ ಗ್ರಾಮೀಣ ಉದ್ಯೋಗ ಯೋಜನೆ, 2005ರಲ್ಲಿ ಜಾರಿಗೆ ತಂದ ಮಾಹಿತಿ ಹಕ್ಕು ಕಾಯ್ದೆ, ಲೋಕಪಾಲ್, ಆಹಾರ ಭದ್ರತಾ ಕಾಯ್ದೆ, 2009ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ ಜಾರಿಗೊಳಿಸಿದ ಮನಮೋಹನ್ ಸಿಂಗ್ ಅವರು ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ದೇಶದ ಕೋಟ್ಯಂತರ ಜನರಿಗೆ ಶಕ್ತಿ ತುಂಬಿದವರು ಎಂದು ಹೇಳಿದ್ದಾರೆ.

ಮನಮೋಹನ್ ಸಿಂಗ್ ಅವರ ನಡೆ, ನುಡಿ, ವ್ಯಕ್ತಿತ್ವ, ಬೆಳೆದು ಬಂದ ಬದುಕು ಎಲ್ಲರಿಗೂ ಆದರ್ಶಮಯ. ಬಡವರು, ದಲಿತರು, ಹಿಂದುಳಿದ, ಅಲ್ಪಸಂಖ್ಯಾತ ವರ್ಗ ಸೇರಿದಂತೆ ಎಲ್ಲಾ ವರ್ಗದವರ ಆಶಾಕಿರಣವಾಗಿ ಯೋಜನೆ ರೂಪಿಸಿದ್ದು, ಐತಿಹಾಸಿಕ ಕ್ರಮಗಳು ಇಂದಿಗೂ ಮಾತನಾಡುತ್ತಿವೆ. ಇಂಥ ಮಹಾನ್ ಮುತ್ಸದ್ಧಿ, ಆರ್ಥಿಕ ತಜ್ಞ, ಅಪರೂಪದ ರಾಜಕಾರಣಿ ಮತ್ತೆ ಸಿಗುವುದಿಲ್ಲ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಜಿ. ಬಿ. ವಿನಯ್ ಕುಮಾರ್ ಭಗವಂತನಲ್ಲಿ ಪ್ರಾರ್ಥಿಸಿದ್ದಾರೆ.

error: Content is protected !!