ದಾವಣಗೆರೆ, ಡಿ.26- ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಕಪ್, ಲೋಟ, ಮೇಣಲೇಪಿತ ಪೇಪರ್ ಹಾಗೂ ಕ್ಯಾರಿ ಬ್ಯಾಗ್ ಬಳಸುವುದನ್ನು ನಿಷೇಧಿಸಲಾಗಿದೆ.
ಬೀದಿ ಬದಿ ವ್ಯಾಪಾರಸ್ಥರು, ತಿಂಡಿ-ತಿನಿಸು ಮಾರಾಟಗಾರರು, ಹೋಟೆಲ್ ಉದ್ದಿಮೆದಾರರು ಪ್ಲಾಸ್ಟಿಕ್ ಕಪ್, ಮೇಣಲೇಪಿತ ಪೇಪರ್-ಕಪ್, ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಚಮಚ ಮತ್ತು ಸ್ಟ್ರಾಗಳನ್ನು ಉಪಯೋಗಿಸದಂತೆ ಸೂಚಿಸಿದ್ದು, ನಿಯಮ ಉಲ್ಲಂಘಿಸಿದರೆ ಪ್ಲಾಸ್ಟಿಕ್ ಸಾಮಾನು ವಶ ಪಡಿಸಿಕೊಳ್ಳುವ ಜತೆಗೆ ನಿಯಮಾನುಸಾರ ದಂಡ ವಿಧಿಸಲಾಗುವುದು.
ಎಲ್ಲಾ ಬೀದಿ-ಬದಿ ಮಾರಾಟಗಾರರು, ಹೋಟೆಲ್ ಉದ್ದಿಮೆದಾರರು ತ್ಯಾಜ್ಯ ನಿರ್ವಹಣಾ ನಿಯಮವನ್ನು ಕಡ್ಡಾಯವಾಗಿ ಪಾಲಿಸಬೇಕೆಂದು ಪಾಲಿಕೆ ಆಯುಕ್ತೆ ರೇಣುಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.