ದಾವಣಗೆರೆ ಸೇರಿ ಮಧ್ಯ ಕರ್ನಾಟಕಕ್ಕೆ ನೀರುಣಿಸುವ ಯೋಜನೆಗೆ ಕೇಂದ್ರದ ನೆರವು
ನವದೆಹಲಿ, ಫೆ. 1 – ಭದ್ರಾ ಮೇಲ್ದಂಡೆ ಯೋಜನೆಗಾಗಿ ಕೇಂದ್ರ ಸರ್ಕಾರ 5,300 ಕೋಟಿ ರೂ.ಗಳನ್ನು ಒದಗಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಜೆಟ್ನಲ್ಲಿ ಪ್ರಕಟಿಸಿದ್ದಾರೆ.
ಬರ ಪೀಡಿತವಾದ ಪ್ರದೇಶಗಳಿಗೆ ಸುಸ್ಥಿರ ಕಿರು ನೀರಾವರಿ ಹಾಗೂ ಕುಡಿಯುವ ನೀರಿನ ಕೆರೆಗಳಿಗೆ ನೀರು ತುಂಬಿಸುವ ಉದ್ದೇಶಕ್ಕಾಗಿ ಈ ಯೋಜನೆ ಜಾರಿಗೆ ತರಲಾಗುವುದು ಎಂದವರು ತಿಳಿಸಿದರು.
ರಾಜ್ಯ ವಿಧಾನಸಭಾ ಚುನಾವಣೆ ಸನಿಹದಲ್ಲಿರುವಾಗಲೇ ಈ ಘೋಷಣೆ ಹೊರ ಬಿದ್ದಿದೆ.
ಭದ್ರಾ ಮೇಲ್ದಂಡೆ ಯೋಜನೆ ಮಧ್ಯ ಕರ್ನಾಟಕದ ಪ್ರಮುಖ ನೀರಾವರಿ ಯೋಜನೆಯಾಗಿದೆ. ಈ ಯೋಜನೆಯ ಮೂಲಕ ದಾವಣಗೆರೆ, ಚಿಕ್ಕಮಗಳೂರು, ಚಿತ್ರದುರ್ಗ ಹಾಗೂ ತುಮಕೂರು ಜಿಲ್ಲೆಗಳ 2.25 ಲಕ್ಷ ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗುವುದು.
ಈ ಯೋಜನೆಯ ಮೂಲಕ ತುಂಗಾ ನದಿಯಿಂದ 17.40 ಟಿ.ಎಂ.ಸಿ. ನೀರನ್ನು ಭದ್ರಾ ಅಣೆಕಟ್ಟೆಗೆ ತರಲಾಗುವುದು. ನಂತರ ಭದ್ರಾ ಅಣೆಕಟ್ಟೆಯಿಂದ 29.90 ಟಿ.ಎಂ.ಸಿ. ನೀರನ್ನು ಕಾಲುವೆಗಳಿಗೆ ಹರಿಸಲಾಗುವುದು. ಈ ಯೋಜನೆಯ ಮೂಲಕ 367 ಸಣ್ಣ ನೀರಾವರಿ ಕೆರೆಗಳಿಗೆ ನೀರು ತುಂಬಿಸಲು ಉದ್ದೇಶಿಸಲಾಗಿದೆ. ಯೋಜನೆಯ ಕಾಮಗಾರಿಗಳು ಈಗಾಗಲೇ ವಿವಿಧ ಹಂತಗಳಲ್ಲಿ ಪ್ರಗತಿಯಲ್ಲಿವೆ.
2000ನೇ ಇಸವಿಯಲ್ಲಿ ಯೋಜನೆ ಘೋಷಿಸಲಾಗಿತ್ತು. 2008ರಲ್ಲಿ ಯೋಜನೆಗೆ ಚಾಲನೆ ನೀಡಲಾಗಿತ್ತು. ಆದರೆ, ಹಲವಾರು ಕಾರಣಗಳಿಂದಾಗಿ ಯೋಜನೆ ಚುರುಕು ಪಡೆದುಕೊಂಡಿರಲಿಲ್ಲ. ಇತ್ತೀಚಿನ ದಿನಗಳಲ್ಲಿ ಕಾಮಗಾರಿ ತ್ವರಿತಗೊಂಡಿದೆ.
ಭದ್ರಾ ಮೇಲ್ದಂಡೆ ಯೋಜನೆಗೆ 21,473.67 ಕೋಟಿ ರೂ.ಗಳ ವೆಚ್ಚ ಮಾಡುವ ಪರಿವರ್ತಿತ ವಿಸ್ತೃತ ಯೋಜನೆಗೆ ರಾಜ್ಯ ಸರ್ಕಾರ ಡಿಸೆಂಬರ್ 16, 2020ರಲ್ಲಿ ಒಪ್ಪಿಗೆ ನೀಡಿತ್ತು.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಷ್ಟ್ರೀಯ ಯೋಜನೆಯಾಗಿ ಮಾಡುವಂತೆ ಮೊದಲೇ ಪ್ರಸ್ತಾವನೆ ಕಳಿಸಿದ್ದೆವು. ಹೀಗಾಗಿ 5300 ಕೋಟಿ ರೂ ನೀಡಿದ್ದು ಸ್ವಾಗತಾರ್ಹ ಎಂದರು.
ಕರ್ನಾಟಕದ ಹಲವಾರು ಯೋಜನೆಗಳಲ್ಲಿ ಇದು ಮೊದಲು ರಾಷ್ಟ್ರೀಯ ಯೋಜನೆ. ಈ ಯೋಜನೆಗೆ ಇಷ್ಟು ದೊಡ್ಡ ಪ್ರಮಾಣದ ಅನುದಾನ ಘೋಷಣೆ ಮಾಡಿದ್ದು ಸಂತಸದ ಸಂಗತಿ ಎಂದವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವರು ಕೇಂದ್ರ ಸರ್ಕಾರದ ಘೋಷಣೆಯನ್ನು ಸ್ವಾಗತಿಸಿದ್ದಾರೆ.