ದಾವಣಗೆರೆ, ಜ.31- ಶಾಸಕರು, ಸಂಸದರು ಹಾಗೂ ಕೇಂದ್ರ ಉಪಸಚಿವರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿರುವ ದಿ. ಕೊಂಡಜ್ಜಿ ಬಸಪ್ಪ ಅವರ ಹೆಸರನ್ನು ನಗರದಲ್ಲಿ ಪುನರ್ ನಿರ್ಮಾಣಗೊಂಡಿರುವ ಖಾಸಗಿ ಅಥವಾ ಸರ್ಕಾರಿ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡುವಂತೆ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕರ್ನಾಟಕ ಜಿಲ್ಲಾ ಸಂಸ್ಥೆ ಒತ್ತಾಯಿಸಿದೆ.
ಕೊಂಡಜ್ಜಿ ಬಸಪ್ಪನವರು ದಾವಣಗೆರೆಯ ಶಾಸಕರಾಗಿ, ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಖಾತೆಯ ಉಪಸಚಿವರಾಗಿ, ರಾಜ್ಯದ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಆಯುಕ್ತರಾಗಿ ಸೇವೆ ಸಲ್ಲಿಸಿದ್ದು, ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಪುನರ್ ನಿರ್ಮಾಣ ಗೊಂಡಿರುವ ಹಳೇ ಬಸ್ ನಿಲ್ದಾಣಕ್ಕೆ ಅವರ ಹೆಸರನ್ನು ಇಡಬೇಕೆಂದು ಜಿಲ್ಲಾ ಸ್ಕೌಟ್ ಆಯುಕ್ತ ಎ.ಪಿ. ಷಡಾಕ್ಷರಪ್ಪ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ. ಸಿದ್ದೇಶ್ವರ, ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಶಾಸಕರುಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಕೊಂಡಜ್ಜಿ ಬಸಪ್ಪ ಅವರು 1946ರಲ್ಲಿ ಚಿತ್ರದುರ್ಗ ಜಿಲ್ಲಾ ಬೋರ್ಡ್ ಅಧ್ಯಕ್ಷರಾಗಿ, 1948ರಲ್ಲಿ ಮೈಸೂರು ಮಹಾರಾಜರು ಸಮಾಜ ಸೇವೆಗಾಗಿ ಬಂಗಾರದ ಪದಕ ನೀಡಿ ಗೌರವಿಸಿದ್ದಾರೆ. 1962ರಲ್ಲಿ ದಾವಣಗೆರೆ ಕ್ಷೇತ್ರದಿಂದ ಮೈಸೂರು ವಿಧಾನಸಭೆಗೆ ಆಯ್ಕೆಯಾಗಿ ಸಹಕಾರ, ವಾರ್ತಾ ಮತ್ತು ಅಬಕಾರಿ ಖಾತೆಯ ಉಪ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ.
ನಂತರ 1967ರಲ್ಲಿ ವಿಧಾನಸಭೆಗೆ ಪುನರ್ ಆಯ್ಕೆಯಾಗಿದ್ದಾರೆ. 1971ರಲ್ಲಿ ಚಿತ್ರದುರ್ಗ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿ, ಕೇಂದ್ರ ಆರೋಗ್ಯ ಮತ್ತು ಕುಟುಂಬ ಯೋಜನಾ ಖಾತೆಯ ಉಪ ಸಚಿವರಾಗಿ ಕಾರ್ಯ ನಿರ್ವಹಿಸಿದ್ದಾರೆ. 1977ರಲ್ಲಿ ದಾವಣಗೆರೆ ಲೋಕಸಭೆಗೆ ಪುನರಾ ಯ್ಕೆಯಾದ ಇವರು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಲ್ಲಿ ಸಚಿವರಾಗಿ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮುಖ್ಯ ಆಯುಕ್ತರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ, ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಸಂಸ್ಥೆಗೆ ಸಲ್ಲಿಸಿದ ಗಣನೀಯ ಸೇವೆಗಾಗಿ ಕರ್ನಾಟಕ ರಾಜ್ಯ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಇನ್ನೂ ಅನೇಕ ಸಹಕಾರ ಸಂಘ-ಸಂಸ್ಥೆಗಳನ್ನು ಕಟ್ಟಿ ಬೆಳೆಸಿರುವ ಇವರು, 1982ರ ನವೆಂಬರ್ 14ರಂದು ನಿಧನರಾಗಿದ್ದಾರೆ.
ದಿ.ಕೊಂಡಜ್ಜಿ ಬಸಪ್ಪ ಅವರು ದಾವಣಗೆರೆಗೆ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ 1987ರಲ್ಲಿ ದಾವಣಗೆರೆ ನಗರದ ಪಿ.ಜೆ. ಬಡಾವಣೆಯ 1ನೇ ಮುಖ್ಯ ರಸ್ತೆಗೆ ಶ್ರೀ ಕೊಂಡಜ್ಜಿ ಬಸಪ್ಪ ರಸ್ತೆ ಎಂದು ನಾಮಕರಣ ಮಾಡುವಂತೆ ಈ ಹಿಂದೆ ದಾವಣಗೆರೆ ನಗರಸಭೆಗೆ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ ಇದು ಕಾರ್ಯಗತವಾಗಿಲ್ಲ. ದಾವಣಗೆರೆ ನಗರಸಭೆಯಿಂದ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸುವ ಬಡಾವಣೆಗೆ ಹೆಸರಿಡಲು ನಿರ್ಣಯಿಸಲಾ ಗಿತ್ತು. ಆದರೆ ಯಾವುದೂ ಕಾರ್ಯರೂಪಕ್ಕೆ ಬಂದಿಲ್ಲ.
ಆದ್ದರಿಂದ ದಿ.ಕೊಂಡಜ್ಜಿ ಬಸಪ್ಪ ಅವರ ಹೆಸರನ್ನು ದಾವಣಗೆರೆ ಖಾಸಗಿ ಬಸ್ ನಿಲ್ದಾಣಕ್ಕೆ ಅಥವಾ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣಕ್ಕೆ ನಾಮಕರಣ ಮಾಡಲು ಆದೇಶಿಸುವಂತೆ ಮನವಿ ಪತ್ರದಲ್ಲಿ ಉಲ್ಲೇಖಿಸಲಾಗಿದೆ.