ತಾಯಿಗೆ ಕೊರೊನಾ ಹುಸಿ ವರದಿ ದೊಡ್ಡಬಾತಿಯ ಹಸುಳೆ ಸಾವು

ತಾಯಿಗೆ ಕೊರೊನಾ ಹುಸಿ ವರದಿ ದೊಡ್ಡಬಾತಿಯ ಹಸುಳೆ ಸಾವು - Janathavaniದಾವಣಗೆರೆ, ಜೂ. 24 – ಇಲ್ಲಿಗೆ ಸಮೀಪದ ದೊಡ್ಡಬಾತಿಯಲ್ಲಿ ಕೊರೊನಾ ಸೋಂಕಿತರೆಂಬ ಹುಸಿ ವರದಿ ಬಂದಿದ್ದ ಬಾಣಂತಿಯ ಆರು ದಿನಗಳ ಗಂಡು ಮಗು ಉಸಿರಾಟದ ತೊಂದರೆಯಿಂದಾಗಿ ಸಾವನ್ನಪ್ಪಿದೆ.

ಕಳೆದ ಜೂನ್ 18 ಹಾಗೂ 19ರಂದು ಐವರು ಗರ್ಭಿಣಿಯರ ಗಂಟಲ ದ್ರವದ ಮಾದರಿಯನ್ನು ಟೆಸ್ಟ್‌ಗೆ ಕಳಿಸಿದಾಗ ಸೋಂಕಿದೆ ಎಂಬ ವರದಿ ಬಂದಿತ್ತು. ಆದರೆ, ನಾಲ್ವರಿಗೆ ಟೆಸ್ಟ್‌ನಲ್ಲಿ ಆದ ಲೋಪದಿಂದಾಗಿ ಈ ವರದಿ ಬಂದಿದ್ದು, ವಾಸ್ತವವಾಗಿ ಸೋಂಕಿರಲಿಲ್ಲ.

ಈ ಪೈಕಿ ನಾಲ್ವರಲ್ಲಿ ದೊಡ್ಡಬಾತಿಯ ಮಹಿಳೆ ಮಂಜಳ ಸಹ ಸೇರಿದ್ದರು. ಅವರಿಗೆ ಕಳೆದ ಗುರುವಾರ ನಾರ್ಮಲ್ ಹೆರಿಗೆಯಾಗಿತ್ತು. ಈ ನಡುವೆ, ಎರಡು ಬಾರಿ ಒಂದು ಖಾಸಗಿ ಹಾಗೂ ಬೆಂಗಳೂರಿನ ಎನ್.ಐ.ವಿ. ಲ್ಯಾಬ್‌ಗಳಲ್ಲಿ ಪರೀಕ್ಷೆ ನಡೆಸಿದಾಗ ನೆಗೆಟಿವ್ ವರದಿ ಬಂದಿತ್ತು.

ಇದನ್ನು ಖಚಿತ ಪಡಿಸಲು ಮೂರನೇ ಬಾರಿಗೆ ಟೆಸ್ಟ್‌ಗೆ ಕಳಿಸಲಾಗಿತ್ತು. ಈ ಬಾರಿ ತಾಯಿಯ ಜೊತೆಗೆ ಮಗುವಿನ ಸ್ವಾಬ್ ಸಹ ಪರೀಕ್ಷೆಗೆ ಕಳಿಸಲಾಗಿತ್ತು.

ಈ ನಡುವೆಯೇ ಉಸಿರಾಟದ ತೊಂದರೆಯಿಂದಾಗಿ ಮಗು ಸಾವನ್ನಪ್ಪಿದೆ ಎಂದು ಹೇಳಲಾಗುತ್ತಿದೆ.

ಚೊಚ್ಚಲ ಮಗುವಿನ ಸಾವು ಕುಟುಂಬದವರಲ್ಲಿ ಆಘಾತ ತಂದಿದೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿರುವ ಹಸುಳೆಯ ಕುಟುಂಬದವರು, ಈ ಸಾವಿಗೆ ಖಾಸಗಿ ಲ್ಯಾಬ್ ಹಾಗೂ ಮಗುವಿನ ಕಾಳಜಿಗೆ ನಿರ್ಲಕ್ಷ್ಯ ತೋರಿದ  ಆಸ್ಪತ್ರೆ ಸಿಬ್ಬಂದಿ ಕಾರಣ ಎಂದು ದೂರಿದ್ದಾರೆ.

ಬಾಣಂತಿಗೆ ಕೊರೊನಾ ಇದೆ ಎಂದು ಹೇಳಿ ಕುಟುಂಬದ ನಮ್ಮೆಲ್ಲರನ್ನೂ ಕ್ವಾರಂಟೈನ್‌ಗೆ ಹಾಕಿದ್ದರು. ತಾಯಿ – ಮಗುವಿನ ಸ್ಥಿತಿ ಏನಾಗಿದೆ ಎಂಬುದೂ ಗೊತ್ತಾಗಲಿಲ್ಲ. ಮಗು ಚೆನ್ನಾಗಿದೆ ಎಂದು ಹೇಳುತ್ತಲೇ ಇದ್ದರು. ಈಗ ಇದ್ದಕ್ಕಿದ್ದಂತೆ ಮಗು ಮೃತಪಟ್ಟಿದೆ ಎಂದು ಮೃತದೇಹವನ್ನು ಕೊಟ್ಟಿದ್ದಾರೆ ಎಂದು ಮಗುವಿನ ತಾತ ಮಾರುತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಂದೆಡೆ ಸಿ.ಜಿ. ಆಸ್ಪತ್ರೆಯಲ್ಲಿ ನಮ್ಮನ್ನು ಇರಿಸಿದಾಗ ಯಾವುದೇ ತಪಾ ಸಣೆ ಮಾಡಿಲ್ಲ, ಚಿಕಿತ್ಸೆಯನ್ನೂ ಕೊಟ್ಟಿಲ್ಲ. ಆಸ್ಪತ್ರೆಯ ಚಿಕಿತ್ಸೆ ಸಮರ್ಪಕವಾಗಿಲ್ಲ ಎಂದೂ ಕುಟುಂಬದವರು ಹೇಳಿದ್ದಾರೆ.

ಈ ಬಗ್ಗೆ ಸ್ಪಷ್ಟನೆ ನೀಡಿರುವ ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಬುಧವಾರ ಬೆಳಗಿನ ಜಾವ 7 ಗಂಟೆಗೆ ಮಗು ನಿಧನವಾಗಿದೆ. ಮಗುವಿನ ಸಾವಿಗೆ ಶ್ವಾಸಕೋಶದಲ್ಲಿ ಉಂಟಾದ ತೊಂದರೆ ಹಾಗೂ ಬಹು ಅಂಗ ವೈಫಲ್ಯ ಕಾರಣ ಎಂದು ಹೇಳಿದ್ದಾರೆ.

ಮಗುವಿಗೆ ಕೊರೊನಾ ನೆಗೆಟಿವ್ ಬಂದಿತ್ತು.  ಮಗುವನ್ನು ಅಸ್ವಸ್ಥ ನವಜಾತ ಶಿಶು ಕಾಳಜಿ ಘಟಕ (ಎಸ್.ಎನ್.ಸಿ.ಯು.)ನಲ್ಲಿ ಇರಿಸಲಾಗಿತ್ತು ಎಂದು ತಿಳಿಸಿದ್ದಾರೆ.

error: Content is protected !!