ಜಿಲ್ಲಾಡಳಿತಕ್ಕೆ ಜಿಲ್ಲಾ ಬಿಜೆಪಿ ಕಾನೂನು – ಸಂಸದೀಯ ಪ್ರಕೋಷ್ಟ ಮುಖಂಡರ ಮನವಿ
ದಾವಣಗೆರೆ, ಮೇ 8- ಕೊರೊನಾ ಸೋಂಕಿನ ಬಗ್ಗೆ ವಿವರ ನೀಡದವರ ಬಗ್ಗೆ ದೇಶ ದ್ರೋಹ ಕೇಸ್ ದಾಖಲಿಸುವ ಮತ್ತು ಕೊರೊನಾ ಶಂಕಿತರನ್ನು ಕ್ವಾರಂಟೈನ್ ಮಾಡಿರುವ ಸ್ಥಳಗಳಿಂದ ಸ್ಥಳಾಂತರಿಸುವಂತೆ ಜಿಲ್ಲಾ ಬಿಜೆಪಿ ಕಾನೂನು ಮತ್ತು ಸಂಸದೀಯ ಪ್ರಕೋಷ್ಟದ ಮುಖಂಡರು ಜಿಲ್ಲಾಡಳಿತವನ್ನು ಆಗ್ರಹಿಸಿದ್ದಾರೆ.
ನಗರದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರು ಹೆಚ್ಚಾಗುತ್ತಿದ್ದು, ಜನರಲ್ಲಿ ಆತಂಕ ಹೆಚ್ಚುತ್ತಿದೆ. ಅಲ್ಲದೇ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಆಶಾ ಕಾರ್ಯಕರ್ತರು ಮನೆ ಮನೆಗೆ ತೆರಳಿ ಕಾಯಿಲೆ ಇದ್ದವರ ಹಾಗೂ ಮಕ್ಕಳ, ವಯ ಸ್ಸಾದವರ ವಿವರವನ್ನು ಪಡೆಯುತ್ತಿದ್ದಾರೆ. ಆದರೆ ಈ ವಿವರ ಕೊಡುವಾಗ ಜನರು ಕೆಲವೊಂದು ಆರೋಗ್ಯದ ಸಮಸ್ಯೆಗಳನ್ನು ಹೇಳು ಕೊಳ್ಳುತ್ತಿಲ್ಲ. ಆದ್ದರಿಂದ ಪ್ರತಿಯೊಬ್ಬರ ಮನೆ ಮನೆಗೆ ತೆರಳಿ ದೇಹದ ಉಷ್ಣಾಂಶ ತಪಾಸಣೆ ಮಾಡುವುದರಿಂದ ಕೊರೊನಾ ಸೋಂಕಿತರನ್ನು ಪತ್ತೆ ಮಾಡಬಹುದು. ಆದ್ದರಿಂದ ಜಿಲ್ಲಾಧಿಕಾರಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಮತ್ತು ಜನನಿಬಿಡ ಪ್ರದೇಶಗಳಲ್ಲಿ ಕ್ವಾರಂಟೈನ್ ಮಾಡಿರುವ ಶಂಕಿತರನ್ನು ಬೈಪಾಸ್ ನಲ್ಲಿರುವ ವಿಶ್ವಾರಾಧ್ಯ ಕ್ಯಾನ್ಸರ್ ಹಾಸ್ಪಿಟಲ್ ಗೆ ಸ್ಥಳಾಂತರಿಸಬೇಕು ಹಾಗೂ ಈಗಾಗಲೇ ಸೋಂಕಿನ ಮಾಹಿತಿ ನೀಡದೇ ಇರುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯಲ್ಲಿ ಮುಖಂಡರು ಒತ್ತಾಯಿಸಿದ್ದಾರೆ.
ವಿನೋಬನಗರದ ನರಹರಿ ಶೇಟ್ ಸಭಾ ಭವನದಲ್ಲಿ ಕಾರಂಟೈನ್ ಮಾಡಲಾಗಿದ್ದ ಇಬ್ಬರು ವ್ಯಕ್ತಿಗಳು ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸಿದ್ದು, ಇವರ ಮೇಲೆ ಮತ್ತು ತಪ್ಪಿಸಿಕೊಂಡು ಹೋಗಲು ಪ್ರಚೋದಿಸಿದವರ ಮೇಲೆ ದೇಶ ದ್ರೋಹದ ಕೇಸ್ ದಾಖಲಿಸುವಂತೆ ನ್ಯಾಯವಾದಿಗಳಾದ ಎ.ಸಿ. ರಾಘವೇಂದ್ರ, ಹೆಚ್. ದಿವಾಕರ್, ಕೆ.ಹೆಚ್. ಧನಂಜಯ, ಪಿ.ವಿ. ಶಿವು, ಎಲ್. ದಯಾನಂದ, ಎ.ಎಸ್. ಮಂಜುನಾಥ ಮನವಿ ಮಾಡಿದ್ದಾರೆ.