ಸೀಲ್‌ಡೌನ್‌ಗೆ ಶಿವನಗರದಲ್ಲಿ ಸ್ಥಳೀಯರ ತೀವ್ರ ವಿರೋಧ

ದಾವಣಗೆರೆ, ಮೇ 12- ಕೊರೊನಾ ‌ಸೋಂಕಿತ ವ್ಯಕ್ತಿಯ ಪ್ರದೇಶವನ್ನು ಕಂಟೈನ್ ಮೆಂಟ್ ವಲಯವನ್ನಾಗಿಸಿ ಸೀಲ್ ಡೌನ್ ಮಾಡುವುದಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿ ಬೀದಿಗಿಳಿದು ಹೋರಾಟ ನಡೆಸಿರುವ ಘಟನೆ ‌ನಗರದಲ್ಲಿಂದು ನಡೆದಿದೆ.

ರಾಜಸ್ಥಾನದ ಅಜ್ಮೀರ್ ದರ್ಗಾಗೆ ಹೋಗಿ ಬಂದಿದ್ದ 22 ವರ್ಷದ ಕೊರೊನಾ ಸೋಂಕಿತ ಯುವಕನ (ಪಿ-847) ವಾಸ ಸ್ಥಳವಾದ ಶಿವನಗರ ಪ್ರದೇಶ ಸೀಲ್‍ಡೌನ್ ಮಾಡುವುದನ್ನು ವಿರೋಧಿಸಿ ಸ್ಥಳೀಯ ನಿವಾಸಿಗಳು ಬೆಳಗ್ಗೆ ನೂರಾರು ಸಂಖ್ಯೆಯಲ್ಲಿ ಜಮಾಯಿಸಿ ರಸ್ತೆಯಲ್ಲಿ ಧರಣಿ ಕುಳಿತು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಿಯಮಾನುಸಾರ ಸೀಲ್‍ಡೌನ್‍ಗೆ ಮುಂದಾದ ಜಿಲ್ಲಾಡಳಿತದ ನಡೆ ವಿರೋಧಿಸಿ ಶಿವನಗರದ ನಿವಾಸಿಗಳು 144ನೇ ಸೆಕ್ಷನ್‌ ಇದ್ದರೂ‌‌ ಕೂಡ ಅದರ ಉಲ್ಲಂಘನೆಯಾಗಿ ನೂರಾರು ಸಂಖ್ಯೆಯಲ್ಲಿ ಜಮಾಯಿಸಿದ್ದಲ್ಲದೆ, ಸಾಮಾಜಿಕ ಅಂತರ ಪಾಲಿಸದೆ, ಕೆಲವರು ಮಾಸ್ಕ್ ಕೂಡ ಧರಿಸದೆ, ಸೋಂಕು ಹರಡುತ್ತದೆ ಎಂಬ ಭಯವೂ ಇಲ್ಲದೆ ಗುಂಪುಗೂಡಿ ಪ್ರತಿಭಟಿಸಿದರು. 

ಕೂಲಿ ಕಾರ್ಮಿಕರೇ ಹೆಚ್ಚಿರುವ ಏರಿಯಾ ಬಂದ್ ಮಾಡಿದರೆ ನಾವು ಎಲ್ಲಿಗೆ ಹೋಗಬೇಕು. ಒಂದೇ ಸಮುದಾಯವನ್ನು ಗುರಿಯಾಗಿಸಿಕೊಂಡು ಕಂಟೈನ್‍ಮೆಂಟ್ ಝೋನ್ ಮಾಡುವುದು ಸರಿಯಲ್ಲ ಎಂದು ನಿವಾಸಿಗಳು ಆಕ್ಷೇಪ ವ್ಯಕ್ತಪಡಿಸಿದರು.

 ಅಗತ್ಯ ಸರಕು ಪೂರೈಕೆ ವ್ಯವಸ್ಥೆ : ಹೊಸ ಕಂಟೇನ್‌ಮೆಂಟ್‌ ವಲಯವಾಗಿರುವ ನಗರದ ಶಿವನಗರದಲ್ಲಿ ಜನರು ಹಲವು ಕಾರಣಗಳಿಗಾಗಿ ವಿರೋಧ ವ್ಯಕ್ತಪಡಿಸಿದ್ದರು. ಅಲ್ಲಿನ ಜನರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.

100 ಮೀಟರ್ ಕಂಟೇನ್‌ಮೆಂಟ್‌ ವಲಯದ ಬಗ್ಗೆ ಅಲ್ಲಿನವರಿಗೆ ಸ್ಪಷ್ಟನೆ ನೀಡಲಾಗಿದೆ. ತರಕಾರಿ ಹಾಗೂ ಹಾಲು ಸೇರಿದಂತೆ ಹಲವಾರು ಅಗತ್ಯ ವಸ್ತುಗಳ ಪೂರೈಕೆಗೆ ವ್ಯವಸ್ಥೆ ಮಾಡಿದ್ದೇವೆ ಎಂದವರು ಹೇಳಿದ್ದಾರೆ.

error: Content is protected !!