ದಾವಣಗೆರೆ,ಮೇ 12- ವ್ಯಾಪಾರ ಹಾಗೂ ಕೈಗಾರಿಕಾ ಚಟುವಟಿಕೆಗಳಿಗೆ ಅನುಮತಿ ನೀಡಿರುವ ಜಿಲ್ಲಾಧಿಕಾರಿಗಳ ಕ್ರಮವನ್ನು ಮಹಾನಗರ ಪಾಲಿಕೆ ಮಾಜಿ ಸದಸ್ಯ ಶಿವನಳ್ಳಿ ರಮೇಶ್ ಸ್ವಾಗತಿಸಿದ್ದಾರೆ.
ಲಾಕ್ ಡೌನ್ ಸಂದರ್ಭದಲ್ಲಿ ಆರ್ಥಿಕತೆಗೆ ನೀಡಲಾಗಿರುವ ವಿನಾಯಿತಿಯನ್ನು ನಗರಕ್ಕೂ ಅನ್ವಯಿಸುವಂತೆ ವ್ಯಾಪಾರ, ವಹಿವಾಟುಗಳಿಗೆ ಜಿಲ್ಲಾಧಿಕಾರಿಗಳು ಅನುಮತಿ ನೀಡಿರುವುದು ವರ್ತಕ ಬಾಂಧವರಲ್ಲಿ ಸಂತಸವನ್ನುಂಟು ಮಾಡಿದೆ ಎಂದು ಅವರು ತಿಳಿಸಿದ್ದಾರೆ.
ವರ್ತಕರಿಗೆ ವ್ಯಾಪಾರ, ವಹಿವಾಟುಗಳಿಗೆ ನಿಗದಿಪಡಿಸಿರುವ ನಿಬಂಧನೆಗಳ ಪೈಕಿ ಮಹಾನಗರ ಪಾಲಿಕೆಯಿಂದ ಮುಚ್ಚಳಿಕೆ ಬರೆದುಕೊಡುವುದೂ ಒಂದಾಗಿದೆ. ಈ ಮುಚ್ಚಳಿಕೆ ಪತ್ರ ಕುರಿತಂತೆ ನಗರ ಪಾಲಿಕೆಯು ನಮೂನೆಯೊಂದನ್ನು ಸಿದ್ಧಪಡಿಸಿ, ಆಯಾ ವಾರ್ಡುಗಳ ಬಿಲ್ ಕಲೆಕ್ಟರ್ ಮತ್ತು ಆರೋಗ್ಯ ನಿರೀಕ್ಷಕರ ಮೂಲಕ ವ್ಯಾಪಾರಸ್ಥರ ಬಳಿಗೆ ಹೋಗಿ ಮುಚ್ಚಳಿಕೆ ಪತ್ರ ಪಡೆಯುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಈ ಮುಚ್ಚಳಿಕೆ ಪತ್ರವನ್ನು ಕೊಡುವುದಕ್ಕೆ ಎಲ್ಲಾ ವ್ಯಾಪಾರಸ್ಥರು ನಗರ ಪಾಲಿಕೆಗೆ ಒಂದೇ ವೇಳೆಗೆ ಬಂದಲ್ಲಿ ಗೊಂದಲ ಉಂಟಾಗಬಹುದು. ಅಲ್ಲದೇ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲು ಸಾಧ್ಯವಾಗುವುದಿಲ್ಲ. ಈ ನಿಟ್ಟಿನಲ್ಲಿ ಇದನ್ನು ಸರಿಪಡಿಸುವ ಉದ್ದೇಶದಿಂದ ಪಾಲಿಕೆಯೇ ವ್ಯಾಪಾರಸ್ಥರ ಬಳಿಗೆ ಹೋಗಿ ಮುಚ್ಚಳಿಕೆ ಪತ್ರ ಪಡೆಯುವುದು ಸೂಕ್ತ ಎಂದು ಶಿವನಳ್ಳಿ ರಮೇಶ್ ಜಿಲ್ಲಾಧಿಕಾರಿಗಳಿಗೆ ಮತ್ತು ಪಾಲಿಕೆ ಆಯುಕ್ತರಿಗೆ ಸಲಹೆ ನೀಡಿದ್ದಾರೆ.