ದೈವಿಕ ಶಕ್ತಿ ಕೇಂದ್ರವಾಗಿಸಿದ ಶಾಮನೂರು ಸೀನಪ್ಪ ಮನೆತನದ ಕಾರ್ಯ ಮೆಚ್ಚುವಂತಹದ್ದು.
– ಎಸ್.ಟಿ. ಕುಸುಮ ಶ್ರೇಷ್ಠಿ, ಶ್ರೀಧರ ಸೇವಾ ಟ್ರಸ್ಟ್ ಅಧ್ಯಕ್ಷರು
ದಾವಣಗೆರೆ, ಡಿ.16- ಹಣಕ್ಕಾಗಿ ಆಸೆ ಪಡದೇ ತಮ್ಮ ಜಾಗವನ್ನು ದೈವಿಕ ಶಕ್ತಿ ಕೇಂದ್ರವಾಗಿಸಿ, ಶ್ರೀ ಚೌಡಾಂಬಿಕ ದೇವಿ ಹಾಗೂ ಶ್ರೀ ಶ್ರೀಧರ ಸ್ವಾಮಿಗಳ ಕೃಪಾಶೀರ್ವಾದ ಭಕ್ತರಿಗೆ ಕರುಣಿಸುವ ಉತ್ತಮ ಕಾಯಕವನ್ನು ಶಾಮನೂರು ಕುಟುಂಬದ ಎಸ್.ಎನ್. ಪಾರ್ಥನಾಥ್ ಮಾಡಿದ್ದಾರೆ ಎಂದು ವರ್ತಕರೂ, ಶ್ರೀಧರ ಸೇವಾ ಟ್ರಸ್ಟ್ ಅಧ್ಯಕ್ಷರೂ ಆದ ಎಸ್.ಟಿ. ಕುಸುಮ ಶ್ರೇಷ್ಠಿ ಮೆಚ್ಚುಗೆ ವ್ಯಕ್ತಪಡಿಸಿದರು.
ನಗರದ ಬಿ.ಟಿ. ಗಲ್ಲಿಯಲ್ಲಿ ಚೌಡೇಶ್ವರಿ ಕಾಂಪ್ಲೆಕ್ಸ್ ನಲ್ಲಿನ ಗುರು ಮಂದಿರ ಸಭಾಂಗಣದಲ್ಲಿ ಶ್ರೀಧರ ಸೇವಾ ಟ್ರಸ್ಟ್ ವತಿಯಿಂದ ಇಂದು ಹಮ್ಮಿಕೊಂಡಿದ್ದ ಶ್ರೀ ಚೌಡಾಂಬಿಕ ದೇವಿಯ ಇತಿಹಾಸ ಮತ್ತು ದಿವ್ಯ ಅನುಗ್ರಹ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.
92 ವರ್ಷಗಳ ಹಿಂದೆ ಖರೀದಿಸಲಾಗಿದ್ದ ಜಾಗದಲ್ಲಿ ಪ್ರತಿಮೆ ಸಿಕ್ಕಾಗ ಅದರ ಬಗ್ಗೆ ಹಲವರಿಂದ ಇದು ಆದಿ ಶಕ್ತಿ ಸ್ವರೂಪಿಣಿ ಚೌಡೇಶ್ವರಿ ದೇವಿಯಾಗಿದ್ದು, ಪೂಜಿಸಿದರೆ ಒಳಿತಾಗುವುದೆಂಬ ಅಭಿಪ್ರಾಯ ವ್ಯಕ್ತವಾಯಿತು. ತಮ್ಮ ಭಾವ ಪಾರ್ಥನಾಥ್ ಅವರು ಇದೀಗ ಚೌಡಾಂಬಿಕ ದೇವಿಯ ಭವ್ಯ ದೇವಸ್ಥಾನ ನಿರ್ಮಿಸಿದ್ದು, ವರ್ತಕರೂ ಸಹ ಈ ದೇವಿಯ ದರ್ಶನ ಪಡೆದೇ ತಮ್ಮ ಮುಂದಿನ ವ್ಯಾಪಾರ ಕಾರ್ಯ ಕೈಗೊಳ್ಳುವ ಪದ್ಧತಿ ರೂಢಿಸಿಕೊಂಡಿದ್ದಾರೆ. ಅಂತೆಯೇ ಈ ದೇವಿಯ ಮಹಿಮೆಯೂ ಸಹ ಇದೆ. ತಮ್ಮ ಮನೆಗೆ ಬಂದಿದ್ದ ಶ್ರೀಧರ ಸ್ವಾಮಿಗಳ ಪಾದುಕೆಯನ್ನೂ ಸಹ ಇಲ್ಲಿ ಸ್ಥಾಪಿಸಿ ಅವುಗಳನ್ನು ಪೂಜಿಸಲಾಗುತ್ತಿದ್ದು, ಇದೊಂದು ಧಾರ್ಮಿಕ ಶಕ್ತಿ ಕೇಂದ್ರವಾಗಿದೆ ಎಂದು ತಿಳಿಸಿದರು.
ಶಾಮನೂರು ಸೀನಪ್ಪ ಅವರ ಅಂಗಡಿ ಎಂದರೆ ನಗರದಲ್ಲಿ ಹಳಬರಿಗೆ ಚಿರಪರಿಚಿತ. ದಾನ, ಧರ್ಮ ಮಾಡಿದ ಶಾಮನೂರು ಕುಟುಂಬದ ಹಿರಿಯರಾದ ಶ್ರೀನಿವಾಸ್ ಮತ್ತು ಈ ಕುಟುಂಬದ ಇತಿಹಾಸವೂ ಇದೆ ಎಂದು ಹೇಳಿದರು. ಮನಸ್ಸು ಮಾಡಿದರೆ ಏನನ್ನಾದರೂ ಸಾಧಿಸಬಹುದು, ಜೀವನ ಒಂದು ನಿಮಿಷದಲ್ಲಿ ಬದಲಾಗುವುದಿಲ್ಲ. ಆದರೆ ಒಂದು ನಿಮಿಷದಲ್ಲಿ ತೆಗೆದುಕೊಂಡ ನಿರ್ಧಾರ ಇಡೀ ಜೀವನವನ್ನೇ ಬದಲಿಸಲಿದೆ ಎಂಬುದಕ್ಕೆ ಈ ದೇವಸ್ಥಾನ ಸ್ಥಾಪಿಸಿ ದೈವಿಕ ಶಕ್ತಿ ನೆಲೆಸುವಂತೆ ಮಾಡಿರುವುದೇ ಸಾಕ್ಷಿಯಾಗಿದೆ ಎಂದರು.
ಪುಸ್ತಕ ಬರೆದ ಎಸ್.ಎನ್. ಪಾರ್ಥನಾಥ್ ಮತ್ತು ಉಮಾ ಪಾರ್ಥನಾಥ್ ಮಾತನಾಡಿದರು. ಸುಲೋಚನಮ್ಮ ಅವರು ಪುಸ್ತಕವನ್ನು ಬಿಡುಗಡೆ ಮಾಡಿದರು.
ಕಾರ್ಯಕ್ರಮದಲ್ಲಿ ಹೆಚ್.ಬಿ. ಮಂಜು ನಾಥ್ ಸೇರಿದಂತೆ ಶಾಮನೂರು ಮನೆತನ ದವರು ಭಾಗವಹಿಸಿದ್ದರು. ಪೂರ್ಣಿಮಾ ಅತಿಥಿ ಪರಿಚಯ ಮಾಡಿದರು. ಸುಮಂತ್ ಅಧ್ಯಕ್ಷರ ಪರಿಚಯಿಸಿದರು. ಸಾತ್ವಿಕ್ ಸ್ವಾಗತಿಸಿದರು.