ಜಗಳೂರು, ಮಾ.29 – ತಾಲ್ಲೂಕಿನ ಕೊಡದಗುಡ್ಡ ವೀರಭದ್ರಸ್ವಾಮಿ ರಥೋತ್ಸವ ಕೋವಿಡ್ ಹಿನ್ನೆಲೆಯಲ್ಲಿ ಸರಳವಾಗಿ ಜರುಗಿತು.
ಪ್ರತಿವರ್ಷ ಸಹಸ್ರಾರು ಸಂಖ್ಯೆಯಲ್ಲಿ ಪಾದ ಯಾತ್ರೆಯ ಮೂಲಕ ಆಗಮಿಸುತ್ತಿದ್ದ ಭಕ್ತಾದಿಗಳಿಗೆ ಎರಡನೇ ಕೋವಿಡ್ ಅಲೆ ನಿರಾಸೆ ಮೂಡಿಸಿತು.
ರಥೋತ್ಸವಕ್ಕೆ ಬಾಳೆ ಹಣ್ಣು, ಉತ್ತತ್ತಿ, ಹೂವು, ಕಾಯಿ ಸಮರ್ಪಿಸಿ, ಭಕ್ತಿ ಮೆರೆದರು. ಸಮಾಳ, ವಾದ್ಯ, ನಂದಿಕೋಲು, ಕುಣಿತದೊಂದಿಗೆ ವೀರಗಾಸೆ ವೇಷದಲ್ಲಿ ಹೆಜ್ಜೆ ಹಾಕಿದ್ದು ಭಕ್ತರ ಮನಸ್ಸನ್ನು ಆಕರ್ಷಿಸಿತು.
ಪಾಳೆಯಗಳಿಗೆ ಬ್ರೇಕ್: ಪ್ರತಿವರ್ಷ ನೆರೆಹೊರೆಯ ತಾಲ್ಲೂಕುಗಳಿಂದ ಆಗಮಿಸಿ, ಪಾಳೆಯ ಹಾಕುತ್ತಿದ್ದ ಭಕ್ತರಿಗೆ ಕೋವಿಡ್ ನಿಯಮ ಪಾಲನೆಯಿಂದ ಬ್ರೇಕ್ ಹಾಕಲಾಗಿತ್ತು. ಸ್ಥಳೀಯರು ಎತ್ತಿನಗಾಡಿ ಆಟೋಗಳ ಮೂಲಕ ಆಗಮಿಸಿ, ಪೂಜೆ ಕಾರ್ಯಕ್ರಮ ನಡೆಸಿ ನಂತರ ರೊಟ್ಟಿ ಇತರೆ ಆಹಾರ ಸೇವಿಸಿ ರಥೋತ್ಸವದ ನಂತರ ಹಿಂತಿರುಗಿದರು.
ದರ್ಶನ ಪಡೆದ ಶಾಸಕ ಎಸ್.ವಿ. ರಾಮಚಂದ್ರ: ವೀರಭದ್ರ ರಥೋತ್ಸವ ಜರುಗುವ ಮುನ್ನ ಶಾಸಕ ಎಸ್.ವಿ. ರಾಮಚಂದ್ರ ದೇವರ ದರ್ಶನ ಪಡೆದರು. ನಂತರ ಮಾತನಾಡಿ ದ ಅವರು ಕೋವಿಡ್ ಹಿನ್ನೆಲೆಯಲ್ಲಿ ಸಾಮಾಜಿಕ ಅಂತರ ಕಾಪಾಡಿ ಮಾಸ್ಕ್ ಧರಿಸಿ ಪ್ರತಿಯೊಬ್ಬರೂ ಜಾಗೃತರಾಗಿರಿ. ತಾಲ್ಲೂಕಿನಲ್ಲಿ ಉತ್ತಮ ಮಳೆ ಬೆಳೆಯಾಗಿ ಸಮೃದ್ಧಿಯ ನಾಡಾಗಲೀ ಜನತೆಗೆ ಉತ್ತಮ ಆರೋಗ್ಯ ಆಯುಷ್ಯ ನೀಡಲಿ ಎಂದರು.
ಈ ಸಂದರ್ಭದಲ್ಲಿ ಗ್ರಾ.ಪಂ. ಅಧ್ಯಕ್ಷ ಸದಾಶಿವಪ್ಪ ಮತ್ತು ಸದಸ್ಯರು, ದೇವಸ್ಥಾನ ಸಮಿತಿ ಪದಾಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು.