ನವದೆಹಲಿ, ಮಾ. 28 – ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಮೂರು ಕೃಷಿ ಕಾಯ್ದೆಗಳನ್ನು ತಕ್ಷಣವೇ ಜಾರಿಗೆ ತರದೇ ಹೋದರೆ ರೈತರ ಆದಾಯವನ್ನು 2022ರ ವೇಳೆಗೆ ದ್ವಿಗುಣಗೊಳಿಸುವ ಗುರಿ ತಲುಪಲು ಸಾಧ್ಯವಾಗುವುದಿಲ್ಲ ಎಂದು ನೀತಿ ಆಯೋಗದ ಸದಸ್ಯ ರಮೇಶ್ ಚಂದ್ ಹೇಳಿದ್ದಾರೆ.
ಪ್ರತಿಭಟನಾ ನಿರತ ರೈತ ಸಂಘಟನೆಗಳು ಕಾಯ್ದೆಗಳ ಕುರಿತು ವಿವರವಾಗಿ ಚರ್ಚಿಸಲು ಮುಂದಾಗಬೇಕು ಎಂದು ಕರೆ ನೀಡಿರುವ ಅವರು, ಕುಲಾಂತರಿ ತಳಿಗಳ ಮೇಲೆ ಸಾರಾ ಸಗಟು ನಿಷೇಧ ಹೇರುವುದು ಸರಿಯಾದ ಕ್ರಮವಲ್ಲ ಎಂದಿದ್ದಾರೆ.
ಖಾಸಗಿ ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದ ಅವರು, ಸರ್ಕಾರ ಹಾಗೂ ರೈತ ಸಂಘಟನೆಗಳು ನಡೆಸುತ್ತಿದ್ದ ಮಾತುಕತೆ ಈಗ ಸ್ಥಗಿತಗೊಂಡಿದೆ. ಈ ಹಿಂದೆ ಜನವರಿ 22ರಂದು ಕೊನೆಯ ಸುತ್ತಿನ ಮಾತುಕತೆ ನಡೆದಿತ್ತು.
ಕೊಡು – ಕೊಳ್ಳುವ ಮೂಲಕ ಮಾತ್ರ ಸಮಸ್ಯೆ ಬಗೆಹರಿಸಲು ಸಾಧ್ಯ. ನಮ್ಮ ಬೇಡಿಕೆಗೇ ಅಂಟಿಕೊಳ್ಳುತ್ತೇವೆ ಎಂದರೆ ನಿರೀಕ್ಷಿತ ರೀತಿಯಲ್ಲಿ ಮುಂದುವರೆಯಲು ಸಾಧ್ಯವಾಗುವುದಿಲ್ಲ ಎಂದು ಚಂದ್ ತಿಳಿಸಿದ್ದಾರೆ.
ಕೃಷಿ ಕಾಯ್ದೆಗಳನ್ನು ಒಂದೂವರೆ ವರ್ಷಗಳ ಕಾಲ ತಡೆ ಹಿಡಿಯು ವುದಾಗಿ ಕೇಂದ್ರ ಸರ್ಕಾರ ಪ್ರಸ್ತಾಪಿಸಿದ್ದು ದಿಟ್ಟ ನಿರ್ಧಾರ ಎಂದಿರುವ ಅವರು, ಕೃಷಿ ಕಾಯ್ದೆಗಳನ್ನು ವಿವರವಾಗಿ ಚರ್ಚಿಸಲು ಸರ್ಕಾರ ಸಿದ್ಧವಿದೆ. ಈ ಪ್ರಸ್ತಾಪವನ್ನು ರೈತ ಮುಖಂಡರು ಪರಿಗಣಿಸಬೇಕು ಎಂದಿದ್ದಾರೆ.
ಸಮಾಧಾನವಾಗಿ ಯೋಚಿಸಲು ಸಾಕಷ್ಟು ಸಮಯ ಇದೆ. ಈ ವಿಷಯದಲ್ಲಿ ಸಮತೋಲನದಿಂದ ಮುಂದುವರೆಯಬೇಕು. ಆರಂಭದಲ್ಲಿ ಭಾವೋದ್ವೇಗವಿದ್ದರೂ, ನಂತರದಲ್ಲಿ ಪ್ರತಿಯೊಬ್ಬರೂ ಸಮಾಧಾನವಾಗಿ ಚರ್ಚಿಸಬೇಕು. ರೈತ ಮುಖಂಡರು ತಮ್ಮ ಪ್ರತಿಕ್ರಿಯೆ ಸಲ್ಲಿಸಬೇಕು. ಇದು ಅವರ ಹಿತದಲ್ಲಿದೆ ಎಂದು ಚಂದ್ ತಿಳಿಸಿದ್ದಾರೆ.