ಸಾರ್ವಜನಿಕರಿಂದ ಜಿಲ್ಲಾಧಿಕಾರಿಗೆ ಮನವಿ
ದಾವಣಗೆರೆ, ಮಾ.19- ನಗರದ ಎಂಸಿಸಿ ಬಿ ಬ್ಲಾಕ್ 5ನೇ ಮುಖ್ಯರಸ್ತೆ, 6ನೇ ಅಡ್ಡರಸ್ತೆ, ನಂ.3561 ವಸತಿ ಪ್ರದೇಶದ ಖಾಲಿ ಜಾಗದಲ್ಲಿರುವ ಮೊಬೈಲ್ ಟವರ್ ಅನ್ನು ತೆರವುಗೊಳಿಸುವಂತೆ ಅಲ್ಲಿನ ನಿವಾಸಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಮೇಲ್ಕಂಡ ನಿವೇಶನದಲ್ಲಿ ಮೊಬೈಲ್ ಟವರ್ ನಿರ್ಮಿಸಿದ್ದು, ಇಲ್ಲಿನ ನಿವಾಸಿಗಳು ಇದನ್ನು ನಿರ್ಮಾಣ ಹಂತದಿಂದಲೇ ವಿರೋಧಿಸುತ್ತಾ ಬಂದಿದ್ದರೂ ಕೂಡ ಅದಾವುದನ್ನು ಗಣನೆಗೆ ತೆಗೆದುಕೊಳ್ಳದೆ ನಿವಾಸಿಗಳ ಕಣ್ತಪ್ಪಿಸಿ, ಟವರ್‌ನ ಕೆಲಸ ಕಾರ್ಯಗಳನ್ನು ಮುಗಿಸಿ ಚಾಲನೆಯಲ್ಲಿ ಇಡಲಾಗಿದೆ.
ಈ ಸಂಬಂಧ ಇಲ್ಲಿನ ನಾಗರಿಕರ ಹಿತರಕ್ಷಣಾ ಸಮಿತಿ, ಹಿರಿಯ ನಾಗರೀಕರ ಸಮಿತಿ ಹಾಗೂ ನಿವಾಸಿಗಳಿಂದ ಪಾಲಿಕೆಗೂ ಮನವಿ ಮಾಡಿದ್ದು, ಪಾಲಿಕೆ ಸ್ಪಂದಿಸಿ, ಆಗಸ್ಟ್‌ನಲ್ಲಿ ಜಫ್ತು ಮಾಡಿದ್ದು, ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿತ್ತು. ಆದರೆ ಅಕ್ಟೋಬರ್‌ನಲ್ಲಿ ಮರು ಚಾಲನೆಯಲ್ಲಿದೆ. ಡಿಸೆಂಬರ್‌ನಲ್ಲಿ ನಡೆದ ಜಿಲ್ಲಾ ಜನಸ್ಪಂದನ ಕಾರ್ಯಕ್ರಮದಲ್ಲಿ ಮನವಿ ಕೂಡ ಸಲ್ಲಿಸಲಾಗಿತ್ತು. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ನಿವಾಸಿಗಳ ಆರೋಗ್ಯದ ದೃಷ್ಟಿಯಿಂದ ಟವರನ್ನು ತೆರವುಗೊಳಿಸುವಂತೆ ನಿವಾಸಿಗಳು ಮನವಿ ಮಾಡಿದ್ದಾರೆ.