ಕಚ್ಚಾ ವಸ್ತುಗಳ ಬೆಲೆ ಏರಿಕೆಗೆ ಖಂಡನೆ
ದಾವಣಗೆರೆ, ಮಾ. 18 – ಮುದ್ರಣಕ್ಕೆ ಬಳಸುವ ಕಚ್ಚಾ ವಸ್ತುಗಳ ಬೆಲೆ ಏರಿಕೆಯನ್ನು ಜಿಲ್ಲಾ ಮುದ್ರ ಣಕಾರರ ಸಂಘ ಖಂಡಿಸಿದ್ದು, ಮುದ್ರಣಕಾರರು ತೀವ್ರ ಸಂಕಷ್ಟಕ್ಕೊಳಗಾಗಿದ್ದಾರೆ ಎಂದು ಸಂಘದ ಉಪಾಧ್ಯಕ್ಷ ಆರ್.ಎಲ್. ಪ್ರಭಾಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಎಸ್ಟಿ ಹೇರಿಕೆ ಮತ್ತು ಕೋವಿಡ್-19 ಮುದ್ರಣ ವಲಯವನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿದೆ. ಈ ಮಧ್ಯೆ ಮುದ್ರಣಕ್ಕೆ ಅಗತ್ಯವಾಗಿ ಬೇಕಾದ ಕಚ್ಚಾ ವಸ್ತುಗಳ ಬೆಲೆ ಏರಿಕೆ ಮುದ್ರಣಕಾರರಿಗೆ ಆಘಾತ ಉಂಟು ಮಾಡಿದೆ ಎಂದರು. ಪೇಪರ್, ಬೋರ್ಡ್, ಇಂಕ್, ಕೆಮಿಕಲ್ ಮತ್ತಿತರೆ ಸಾಮಗ್ರಿಗಳ ಬೆಲೆ ದುಪ್ಪಟ್ಟಾಗಿದ್ದು ಮುದ್ರಣಕಾರರಿಗೆ ಶೇ.35 ರಷ್ಟು ಆರ್ಥಿಕ ಹೊರೆಯಾಗಿದೆ.
ಕಚ್ಚಾ ಸಾಮಗ್ರಿಗಳ ಬೆಲೆ ಕಡಿಮೆ ಮಾಡುವಂತೆ ಒತ್ತಾಯಿಸಿ ಒಂದೆರಡು ದಿನಗಳಲ್ಲಿ ಸಂಘದ ವತಿಯಿಂದ ಡಿಸಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಬೆಲೆ ಏರಿಕೆಯಿಂದ ಗ್ರಾಹಕರಿಗೆ ಸೇವೆ ಒದಗಿಸುವುದು ಅಸಾಧ್ಯವಾಗಿದೆ, ಈಗಿನ ಬೆಲೆ ಏರಿಕೆಯ ಮುದ್ರಣದ ಒಟ್ಟು ಉತ್ಪಾ ದನಾ ವೆಚ್ಚದ ಅಂದಾಜಿನ ಪ್ರಕಾರ ಶೇ 35 ರಷ್ಟು ಹೆಚ್ಚಿನ ಹೊರೆಯಾಗುತ್ತದೆ, ಈ ಹೊರೆಯನ್ನು ನಿಭಾಯಿಸಲು ಉತ್ಪಾದನೆಯಲ್ಲಿ ಶೇ. 25 ರಷ್ಟು ಏರಿಕೆಯನ್ನು ಮುದ್ರಣಕಾರರು ಮಾಡಲೇ ಬೇಕಾಗಿದೆ. ಇದಕ್ಕೆ ಎಲ್ಲರ ಸಹಕಾರ ಅತ್ಯಗತ್ಯ ಎಂದು ಹೇಳಿದರು.
ಸರ್ಕಾರಿ ಕಚೇರಿಗಳು, ಕೈಗಾರಿಕೆಗಳು, ಖಾಸಗಿ ವಲಯ, ಆಸ್ಪತ್ರೆ, ಶಾಲಾ-ಕಾಲೇಜು, ಬ್ಯಾಂಕ್ಗಳು ಪರಿಷ್ಕೃತ ದರಕ್ಕೆ ಹೊಂದಿಕೊಳ್ಳುವಂತೆ ಕೋರಿದರು.
ಈಗಾಗಲೇ ಪರಿಷ್ಕೃತ ದರಪಟ್ಟಿ ಜಾರಿಯಾಗುತ್ತಿದ್ದು ಎಲ್ಲಾ ಗ್ರಾಹಕರು ಸಹಕರಿಸುವಂತೆ ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ಎ.ಎಂ. ಪ್ರಕಾಶ್, ಎಸ್ ರುದ್ರೇಶ್, ಟಿ.ಡಿ. ವೆಂಕಟಗಿರಿ, ಶಿವಶಂಕರ್ ದೀಕ್ಷಿತ್, ಸುರೇಶ್, ಪ್ರಸಾದ್, ಅರುಣ್ಕುಮಾರ್, ಮಂಜುನಾಥ್ ಉಪಸ್ಥಿತರಿದ್ದರು.