ಬೆಂಗಳೂರು, ಮಾ. 17 – ಲಿಂಗಾ ಯತ ಪಂಚಮಸಾಲಿ ಮೀಸಲಾತಿ ಬೇಡಿಕೆ ಈಡೇರಿಕೆ ಕುರಿತು ಸರ್ಕಾರದಿಂದ ವಿಧ್ಯುಕ್ತವಾಗಿ ಆದೇಶ ಪತ್ರ ಜಾರಿಯಾಗು ವವರೆಗೆ ಹೋರಾಟ ಮುಂದುವರೆಯಲಿದೆ ಎಂದು ಕೂಡಲಸಂಗಮದ ಲಿಂಗಾಯತ ಪಂಚಮಸಾಲಿ ಪೀಠದ ಜಗದ್ಗುರು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಮನವಿ ಮೇರೆಗೆ ಹೋರಾಟಕ್ಕೆ ಸೆಪ್ಟಂಬರ್ 15 ರ ವರೆಗೆ ತಾತ್ಕಾಲಿಕ ವಿರಾಮ ನೀಡಲಾಗಿದೆ, ಅಕ್ಟೋಬರ್ 15 ರ ವೇಳೆಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ ಬೃಹತ್ ಸಮಾವೇಶ ನಡೆಸಿ ಹೋರಾಟ ತೀವ್ರಗೊಳಿಸಲಾಗುವುದು ಎಂದರು.
ನಿಯೋಗದಲ್ಲಿ ತೆರಳಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಮನವಿ ಸಲ್ಲಿಸಲಾಗುವುದು, ಮೀಸಲಾತಿ ಪಡೆಯುವ ತನಕ ಹೋರಾಟ ಮುಂದುವರೆಯಲಿದೆ ಎಂದರು.
ನಮ್ಮ ಹೋರಾಟಕ್ಕೆ ಗೌರವ ನೀಡಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಮೀಸಲಾತಿ ಬೇಡಿಕೆ ಈಡೇರಿಸಲು ಆರು ತಿಂಗಳ ಸಮಯ ಕೋರಿದ್ದು, ಅಷ್ಟರೊಳಗೆ ಬೇಡಿಕೆಗಳನ್ನು ಈಡೇರಿಸಬೇಕು, ಇಲ್ಲವಾದಲ್ಲಿ ಹೋರಾಟ ಹೊಸ ಆಯಾಮ ಪಡೆದುಕೊಳ್ಳಲಿದೆ ಎಂದರು.