ದಾವಣಗೆರೆ, ಮಾ.7- ಲೋಕಾಯುಕ್ತ ಬಲಪಡಿ ಸುವಂತೆ ಒತ್ತಾಯಿಸಿ, ಮಾ. 19 ರಿಂದ 22 ರವರೆಗೆ ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಸನ್ನಿಧಾ ನದಿಂದ ಬೆಂಗಳೂರಿನಲ್ಲಿರುವ ಸಿಎಂ ಯಡಿಯೂರಪ್ಪ ಅವರ ಗೃಹ ಕಚೇರಿವರೆಗೆ ಪಾದಯಾತ್ರೆ ನಡೆಸುವುದಾಗಿ ರಾಜ್ಯ ಮಾಹಿತಿ ಹಕ್ಕು ಮತ್ತು ಸಾಮಾಜಿಕ ಕಾರ್ಯಕರ್ತರ ವೇದಿಕೆ ರಾಜ್ಯಾಧ್ಯಕ್ಷ ಕುಣಿಗಲ್ ಹೆಚ್.ಜಿ. ರಮೇಶ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಡಿಯೂರಪ್ಪ ಅವರು ಅಧಿಕಾರಕ್ಕೆ ಬರುವ ಮುನ್ನ ಚುನಾವಣಾ ಸಂದರ್ಭದಲ್ಲಿ ಎಸಿಬಿ ರದ್ದು ಮಾಡಿ ಲೋಕಾಯುಕ್ತ ಬಲಗೊಳಿಸುವ ಆಶ್ವಾಸನೆ ಕೊಟ್ಟಿದ್ದರು, ಆದರೆ ಕೊಟ್ಟ ಆಶ್ವಾಸನೆ ಹುಸಿಯಾಗಿದೆ ಎಂದರು.
ಕೊಟ್ಟ ವಚನ ನೆನಪಿಸುವ ಸಲುವಾಗಿ ಸಿಎಂ ಯಡಿಯೂರಪ್ಪ ಅವರ ಮನೆ ದೇವರು ಯಡಿಯೂರು ಶ್ರೀ ಸಿದ್ಧಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿ, ಪ್ರಸಾದದೊಂದಿಗೆ ಯಡಿಯೂರಿನಿಂದ ಯಡಿಯೂರಪ್ಪ ನಿವಾಸದವರೆಗೆ ಪಾದಯಾತ್ರೆ ನಡೆಸಿ, ಪ್ರಸಾದದೊಂದಿಗೆ ಮನವಿ ಸಲ್ಲಿಸುವುದಾಗಿ ಹೇಳಿದರು.
ನಿವೃತ್ತ ಉಪಲೋಕಾಯುಕ್ತ ಸುಭಾಷ್ ಬಿ. ಆಡಿ, ನಿವೃತ್ತ ಪೊಲೀಸ್ ಮಹಾನಿರ್ದೇಶಕ ಶಂಕರ್ ಎಂ. ಬಿದರಿ, ಧಾರವಾಡ ಜಿಲ್ಲಾ ನಿವೃತ್ತ ನ್ಯಾಯಾಧೀಶ ಸಂಗಪ್ಪ ಮಿಟ್ಟಲ್ ಕೋಡ್, ಕರ್ನಾಟಕ ರಾಷ್ಟ್ರೀಯ ಸಮಿತಿ ಪಕ್ಷದ ಅಧ್ಯಕ್ಷ ರವಿ
ಕೃಷ್ಣರೆಡ್ಡಿ ಅವರ ಉಪಸ್ಥಿತಿಯಲ್ಲಿ ಪಾದಯಾತ್ರೆ ಆರಂಭಗೊಳ್ಳಲಿದೆ ಎಂದರು.
ಯಡಿಯೂರ್, ಕುಣಿಗಲ್, ಸೋಲೂರು, ನೆಲಮಂಗಲ, ಯಶವಂತಪುರ ಮಾರ್ಗದ ಮೂಲಕ ಬೆಂಗಳೂರು ತಲುಪಲಿದ್ದು, 21 ರಂದು ಮೌರ್ಯ ವೃತ್ತದಲ್ಲಿರುವ ಗಾಂಧಿ ಪ್ರತಿಮೆ ಬಳಿ ಸಮಾವೇಶಗೊಂಡು 22 ರಂದು ಮುಖ್ಯಮಂತ್ರಿ ಗೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗುರುಪಾದಯ್ಯ ಮಠದ್ ಹೊನ್ನಾಳಿ, ಚಂದ್ರಶೇಖರ್ ಉಪ್ಪಾರ್ ಬೆಂಗಳೂರು ಗ್ರಾಮಾಂತರ, ಕೆ.ಹೆಚ್. ವೆಂಕಟೇಶ್ ದೊಡ್ಡಬಳ್ಳಾಪುರ, ಹನುಮಂತರಾಯಪ್ಪ ವಿ. ಬೆಂಗಳೂರು ಗ್ರಾಮಾಂತರ, ಹೇಮಂತ್, ಮಹಮದ್ ನಿಸ್ಸಾರ್, ಬಿ.ವಿ. ವಿನಯಕುಮಾರ್, ಅನಿಲ್ ಜೆ.ಟಿ, ಮಧುಕುಮಾರ್, ಕೆ.ಜಿ. ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು.