ಶೇ.7 ರಷ್ಟು ಮೀಸಲಾತಿಗೆ ಆಗ್ರಹ

ದಾವಣಗೆರೆ, ಫೆ.28- ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ತೀರ ಹಿಂದುಳಿದ ಮುಸ್ಲಿಂ ಸಮುದಾಯಕ್ಕೆ ಶೇ. 7 ರಷ್ಟು ಮೀಸಲಾತಿ ನೀಡುವಂತೆ ಮುಸ್ಲಿಂ ಸಮುದಾಯದ ಮುಖಂಡರಾದ ಸೈಯದ್‌ ಸೈಪುಲ್ಲಾ ಆಗ್ರಹಿಸಿದರು.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ವೀರಪ್ಪ ಮೊಯ್ಲಿ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ ಸಂದರ್ಭದಲ್ಲಿ ಅಲ್ಪಸಂಖ್ಯಾತರ ಸಮುದಾಯಗಳಿಗೆ ಶೇ. 7 ರಷ್ಟು ಮೀಸಲಾತಿ ನೀಡಿದ್ದರು. ತದನಂತರ ಅಧಿಕಾರಕ್ಕೆ ಬಂದ ದೇವೇಗೌಡರ ಅವಧಿಯಲ್ಲಿ ಮುಸ್ಲಿಂ ಸಮುದಾಯಕ್ಕೆ ಶೇ. 4 ರಷ್ಟು ಮೀಸಲಾತಿ ನಿಗದಿಪಡಿಸಿದರು. ಈಗಿನ ಜನಸಂಖ್ಯೆಗೆ ಹೋಲಿಸಿದರೆ ಮೀಸಲಾತಿ ಸಾಕಾಗುವುದಿಲ್ಲ ಎಂದು ಹೇಳಿದರು.

ಕರ್ನಾಟಕದಲ್ಲಿ ಶೇ. 14 ರಷ್ಟು ಮುಸ್ಲಿಂ ಜನಸಂಖ್ಯೆ ಇದ್ದು, ಸಮುದಾಯ ಹಲವು ಕ್ಷೇತ್ರಗಳಲ್ಲಿ ಹಿಂದುಳಿದಿದೆ. ಮೇಲೆತ್ತಬೇಕಾದರೆ ಹೆಚ್ಚಿನ ಮೀಸಲಾತಿ ನೀಡುವುದು ಅವಶ್ಯವಿದೆ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಈ ಬಗ್ಗೆ ಕಾಳಜಿ ವಹಿಸಿ ಶೇ. 7 ಕ್ಕೆ ಮೀಸಲಾತಿ ಹೆಚ್ಚಿಸುವಂತೆ ಮನವಿ ಮಾಡಿದರು.

ಈಗಾಗಲೇ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ವಕೀಲರಾದ ಅನೀಸ್‌ ಪಾಶ, ಇಮ್ತಿಯಾಜ್‌ ಹುಸೇನ್‌, ಆದಿಲ್‌ ಖಾನ್‌, ಉಸ್ಮಾನ್‌ ಅಂಗಡಿ ಉಪಸ್ಥಿತರಿದ್ದರು.

error: Content is protected !!