ಒಳಚರಂಡಿ ವ್ಯವಸ್ಥೆ ಪಡೆದುಕೊಳ್ಳಿ ಇಲ್ಲದಿದ್ದರೆ 500 ರೂ. ದಂಡ

ಹರಿಹರ, ಏ.24- ಹರಿಹರ ನಗರದ ಜನತೆಗೆ ಉತ್ತಮ ಗುಣಮಟ್ಟದ ಜೀವನ ನಡೆಸಲು ಒಳಚರಂಡಿ ಪೈಪ್‍ಲೈನ್‍ಗಳನ್ನು ತಮ್ಮ ಮನೆಯ ಹತ್ತಿರದವರೆಗೆ ಅಳವಡಿಸಲಾಗಿದ್ದು, ಅವುಗಳಿಗೆ ಒಳಚರಂಡಿ ಸಂಪರ್ಕ ಪಡೆದುಕೊಳ್ಳಬೇಕಿದೆ.

ಕೆಯುಐಡಿಎಫ್‍ಸಿ-ಕೆಐಯುಡಬ್ಲ್ಯೂಎಂಐಪಿ-ಪಿ.ಐ.ಯು ವತಿಯಿಂದ ನಗರಸಭೆ ವ್ಯಾಪ್ತಿಯಲ್ಲಿ ಕೈಗೊಳ್ಳಲಾಗಿರುವ ಜಲಸಿರಿ ಯೋಜನೆಯಡಿ ಒಳಚರಂಡಿ ಪೈಪ್‌ಲೈನ್, ಮ್ಯಾನ್‌ಹೋಲ್ ಹಾಗೂ ಸಂಸ್ಕರಣಾ ಘಟಕಗಳ ಕಾಮಗಾರಿಯು ಮುಕ್ತಾಯ ಹಂತದಲ್ಲಿದ್ದು, ಅನುಷ್ಠಾನದ ಹಂತದಲ್ಲಿ ಮ್ಯಾನ್‍ಹೋಲ್‍ಗಳಿಂದ ರಸ್ತೆಯ ಬದಿಯವರೆಗೆ ಪೈಪ್‍ಲೈನ್ ಜೋಡಣೆ ಮಾಡಿದ್ದು ಇರುತ್ತದೆ.

ಈ ಯೋಜನೆಯ ಉದ್ದೇಶವು ಹರಿಹರ ನಗರದ ಜನತೆಗೆ ಉತ್ತಮ ಗುಣಮಟ್ಟದ ಜೀವನವನ್ನು ನಡೆಸುವ ಅವಕಾಶ ಕಲ್ಪಿಸುವುದಾಗಿದ್ದು, ಮನೆಗಳಿಗೆ ಒಳಚರಂಡಿ ವ್ಯವಸ್ಥೆಯ ಸಂಪರ್ಕವನ್ನು ಕಲ್ಪಿಸಲು ಈ ಯೋಜನೆಯನ್ನು ಸಿದ್ದಪಡಿಸಲಾಗಿದೆ. 2018 ರ ಆಗಸ್ಟ್ 29 ರಂದು ಗೃಹಬಳಕೆಗೆ ರೂ.3 ಸಾವಿರಗಳನ್ನು ವಸೂಲು ಮಾಡಲು ಸಭೆಯಲ್ಲಿ ಈಗಾಗಲೇ ತೀರ್ಮಾನಿಸಲಾಗಿರುತ್ತದೆ. ಅದರಂತೆ ಸಾರ್ವಜನಿಕರು ಒಳಚರಂಡಿ ಸಂಪರ್ಕ ಪಡೆಯಲು ರೂ.3000 ಗಳನ್ನು ನಗರಸಭೆ ಕಾರ್ಯಾಲಯದಲ್ಲಿ ಪಾವತಿಸಿ, ನಗರಸಭೆಯಿಂದ ಅನುಮತಿ ಪಡೆದ ಪ್ಲಂಬರ್‍ಗಳ ಸಹಾಯ ಪಡೆದು ತಮ್ಮ ಮನೆಯ ಸಂಪರ್ಕದ ಜೋಡಣೆಯನ್ನು ಮಾಡಿಸಿಕೊಳ್ಳಬೇಕು. ಇದೇ ದಿನಾಂಕ 30 ರೊಳಗಾಗಿ ಒಳಚರಂಡಿ ಸಂಪರ್ಕವನ್ನು ಮಾಡಿಕೊಳ್ಳಬೇಕು. ತಪ್ಪಿದಲ್ಲಿ ಅಂತಹವರ ಮೇಲೆ ಪ್ರತಿ ತಿಂಗಳು ರೂ.500 ದಂಡ ಹಾಕಲಾಗುವುದು ಎಂದು ತಿಳಿಸಿದರು.

ಹಣ ತುಂಬಿ ಸಂಪರ್ಕ ಪಡೆದುಕೊಳ್ಳಲು ಅಬ್ದುಲ್ ಕಲೀಲ್  ಮೊಬೈಲ್ ಸಂಖ್ಯೆ: 9844548231, ಯೋಗೇಶ್ವರ 8296379261 ಅವರನ್ನು ಸಂಪರ್ಕಿಸಬಹುದು. ಯಾವುದೇ ಯೋಜನೆ ಯಶಸ್ವಿಯಾಗ ಬೇಕಾದರೆ ಸಾರ್ವಜನಿಕರ ಸಹಭಾಗಿತ್ವ ಅತ್ಯಾವಶ್ಯಕವಾಗಿದ್ದು, ನಗರವನ್ನು ಮಾಲಿನ್ಯರಹಿತ ಸಮಾಜವನ್ನಾಗಿ ಪರಿವರ್ತಿಸಲು ಸಾರ್ವಜನಿಕರು ಕೈ ಜೋಡಿಸಬೇಕು ಎಂದು ನಗರಸಭೆ ಪೌರಾಯುಕ್ತರು ಕೋರಿದ್ದಾರೆ.

error: Content is protected !!