ಡಿಸಿ – ಸಿಇಓ – ಅಧಿಕಾರಿಗಳ ಗ್ರಾಮ ವಾಸ್ತವ್ಯ : ಅರ್ಜಿಗಳ ವಿಲೇವಾರಿ

ದಾವಣಗೆರೆ, ಫೆ.16- ಜಿಲ್ಲಾಧಿಕಾರಿಗಳು, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಹಾಗೂ ಕಂದಾಯ ಇಲಾಖೆಯ ಇತರೆ ಅಧಿಕಾರಿಗಳ ಗ್ರಾಮ ವಾಸ್ತವ್ಯ ಕಾರ್ಯಕ್ರಮವನ್ನು ಇದೇ ದಿನಾಂಕ 20 ರಂದು ಜಗಳೂರು ತಾಲ್ಲೂಕಿನ ಸೊಕ್ಕೆ ಹೋಬಳಿ ಅಗಸನಹಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿರುತ್ತದೆ.

ಸಾರ್ವಜನಿಕರು ಈ ದಿನದಂದು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕಂದಾಯ ಇಲಾಖೆಯ ವಿವಿಧ ಸೇವೆಗಳು/ಯೋಜನೆಗಳಾದ ಪೌತಿ ಖಾತೆ ಬದಲಾವಣೆ, ಸಾಮಾಜಿಕ ಭದ್ರತಾ ಯೋಜನೆ ಪಿಂಚಣಿ ಸೌಲಭ್ಯ, ಅತಿವೃಷ್ಠಿ/ಬರ ಪರಿಹಾರ, ಪಡಿತರ ಚೀಟಿ, ಪಹಣಿ ಲೋಪದೋಷ ತಿದ್ದುಪಡಿ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಈಗಾಗಲೇ ಸ್ವೀಕರಿಸಲಾಗಿರುವ ಅರ್ಜಿಗಳನ್ನು ಈ ದಿನಾಂಕದಂದು ಇತ್ಯರ್ಥಪಡಿಸಲಾಗುವುದು.

ಅಂದೇ ಉಳಿದ ತಾಲ್ಲೂಕುಗಳಲ್ಲಿ ತಹಶೀಲ್ದಾರರುಗಳು ಹಾಗೂ ತಾಲ್ಲೂಕು ಮಟ್ಟದ ಇತರೆ ಅಧಿಕಾರಿಗಳು ದಾವಣಗೆರೆ ತಾಲ್ಲೂಕಿನ ಮಾಯಕೊಂಡ ಹೋಬಳಿಯ ಅತ್ತಿಗೆರೆ ಗ್ರಾಮ, ಹರಿಹರ ತಾಲ್ಲೂಕಿನ ಮಲೇಬೆನ್ನೂರು ಹೋಬಳಿಯ ನಿಟ್ಟೂರು ಗ್ರಾಮ, ಹೊನ್ನಾಳಿ ತಾಲ್ಲೂಕಿನ ಸಾಸ್ವೆಹಳ್ಳಿ-2 ಹೋಬಳಿಯ ಕೂಲಂಬಿ ಗ್ರಾಮ, ಚನ್ನಗಿರಿ ತಾಲ್ಲೂಕಿನ ಉಬ್ರಾಣಿ ಹೋಬಳಿಯ ದುರ್ವಿಗೆರೆ ಗ್ರಾಮ, ನ್ಯಾಮತಿ ತಾಲ್ಲೂಕಿನ ಬೆಳಗುತ್ತಿ ಹೋಬಳಿಯ ಚಿನ್ನಿಕಟ್ಟಿ ಗ್ರಾಮ, ಈ ಗ್ರಾಮಗಳಲ್ಲೂ ಸಹಾ ಗ್ರಾಮವಾಸ್ತವ್ಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದ್ದಾರೆ.

error: Content is protected !!