ದೆಹಲಿ : ಪ್ರತಿಭಟನಾ ಸ್ಥಳಗಳಲ್ಲಿ ಕರಗುತ್ತಿರುವ ಜನಸಂದಣಿ

ನವದೆಹಲಿ, ಫೆ. 16 – ಕೇಂದ್ರ ಸರ್ಕಾರ ಜಾರಿಗೆ ತಂದ ಮೂರು ಕೃಷಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆ ಮೂರು ತಿಂಗಳಿಗೆ ಸಮೀಪಿಸುತ್ತಿರುವಂತೆಯೇ ದೆಹಲಿಯ ಪ್ರಮುಖ ಪ್ರತಿಭಟನಾ ಸ್ಥಳಗಳಾದ ಸಿಂಘು, ಟಿಕ್ರಿ ಹಾಗೂ ಘಾಜಿಪುರಗಳಲ್ಲಿ ಪ್ರತಿಭಟನಾಕಾರರ ಸಂಖ್ಯೆ ವಿರಳವಾಗುತ್ತಿದೆ. ಆದರೆ, ಪ್ರತಿಭಟನೆ ಹಿಂದಿನಂತೆಯೇ ಬಲಿಷ್ಠವಾಗಿದೆ ಎಂದು ರೈತ ಮುಖಂಡರು ಸಮರ್ಥಿಸಿಕೊಂಡಿದ್ದಾರೆ.

ದೆಹಲಿಯ ಗಡಿಯಲ್ಲಿ ಸ್ಥಾಪಿಸಲಾಗಿರುವ ಸಾಮೂಹಿಕ ಭೋಜನ ತಾಣಗಳು ಹಾಗೂ ಟೆಂಟ್‌ಗಳು ಖಾಲಿಯಾಗುತ್ತಿವೆ. ಸಂಘಟನೆಗಾಗಿ ಪ್ರತಿಭಟನಾ ನಿರತರು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗುತ್ತಿದ್ದಾರೆ ಎಂದು ರೈತ ಮುಖಂಡರು ಹೇಳಿದ್ದಾರೆ.

ಜನರ ಗುಂಪು ಕರಗುತ್ತಿಲ್ಲ. ನಾವು ಹೋರಾಟವನ್ನು ಹರಡುತ್ತಿದ್ದೇವೆ. ಕೇವಲ ಪಂಜಾಬ್ ಹಾಗೂ ಹರಿಯಾಣ ಅಷ್ಟೇ ಅಲ್ಲದೇ ಬೇರೆ ಗ್ರಾಮಗಳು ಹಾಗೂ ಜಿಲ್ಲೆಗಳಿಂದ ಜನರನ್ನು ಕರೆ ತರುತ್ತಿದ್ದೇವೆ ಎಂದು ಮುಖಂಡರು ತಿಳಿಸಿದ್ದಾರೆ.

ಪಂಜಾಬ್‌ನಲ್ಲಿ ಅಲೆ ಸೃಷ್ಟಿಸಲು ಕೆಲ ತಿಂಗಳುಗಳು ಬೇಕಾದವು. ಇದೇ ರೀತಿಯ ಅಲೆಯನ್ನು ಇಡೀ ದೇಶದಲ್ಲಿ ಮೂಡಿಸಲು ಸ್ವಲ್ಪ ಸಮಯ ಬೇಕಾಗುತ್ತದೆ. ಆದರೆ, ನಮ್ಮ ಹೋರಾಟ ಬಿರುಸು ಕಳೆದುಕೊಂಡಿಲ್ಲ. ಇದರ ಬದಲು ದಿನದಿಂದ ದಿನಕ್ಕೆ ಪ್ರತಿಭಟನೆ ಬಲಿಷ್ಠವಾಗುತ್ತಿದೆ ಎಂದು ಕ್ರಾಂತಿಕಾರಿ ಕಿಸಾನ್ ಯೂನಿಯನ್ (ಪಂಜಾಬ್) ಮುಖಂಡ ಅವತಾರ್ ಸಿಂಗ್  ಹೇಳಿದ್ದಾರೆ.

ಸಾಕಷ್ಟು ರೈತರು ಗಡಿಗಳಿಂದ ತಮ್ಮ ಮನೆಗಳಿಗೆ ಹೋಗಿ ಬರುತ್ತಿದ್ದಾರೆ. ಅವರು ಹೊಲಗಳನ್ನೂ ನೋಡಿಕೊಳ್ಳುತ್ತಿದ್ದಾರೆ. ಆದರೆ, ಗಡಿಗಳಲ್ಲಿನ ಪ್ರತಿಭಟನಾ ಸ್ಥಳಗಳಲ್ಲಿ ಜನಸಂಖ್ಯೆ ಎಂದಿನಂತೆಯೇ ಇದೆ. ಫೆಬ್ರವರಿ 18ರಂದು ದೇಶಾದ್ಯಂತ ರೈಲು ತಡೆಗೆ ಕರೆ ನೀಡಲಾಗಿದ್ದು, ಅಂದು ಇನ್ನಷ್ಟು ಜನರು ಬರಲಿದ್ದಾರೆ ಎಂದವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಸಂಯುಕ್ತ ಕಿಸಾನ್ ಮೋರ್ಚಾ ಗಡಿಗಳಲ್ಲಿ ಜನರ ಸಂಖ್ಯೆ ಸ್ಥಿರವಾಗಿರುವಂತೆ ನೋಡಿಕೊಳ್ಳುತ್ತಿದೆ. ಪ್ರತಿಭಟನಾಕಾರರು ತಮ್ಮ ಮನೆಗಳನ್ನು ನಿರ್ವಹಿಸಲು ವ್ಯವಸ್ಥೆ ಮಾಡಲಾಗುತ್ತಿದೆ. ಫೆಬ್ರವರಿ 18ರ ನಂತರವೇ ಪ್ರತಿಭಟನಾ ನಿರತರ ಸಂಖ್ಯೆ ಹೆಚ್ಚಾಗಲಿದೆ. ಶೀಘ್ರದಲ್ಲೇ ದೇಶಾದ್ಯಂತ ಇರುವ ಜನರು ದೆಹಲಿಗೆ ಕಾಲ್ನಡಿಗೆಯಲ್ಲಿ ಬರುವಂತೆ ಕರೆ ನೀಡಲಾಗುವುದು ಎಂದು ಅವತಾರ್ ಸಿಂಗ್ ತಿಳಿಸಿದ್ದಾರೆ.

ಹರಿಯಾಣ, ಮಹಾರಾಷ್ಟ್ರ ಹಾಗೂ ರಾಜಸ್ಥಾನಗಳಲ್ಲಿ ಮಹಾಪಂಚಾಯತ್‌ಗಳನ್ನು ಆಯೋಜಿಸಲಾಗಿದೆ. ಅದೂ ಸಹ ಸಿಂಘು, ಟಿಕ್ರಿ ಹಾಗೂ ಘಾಜಿಪುರ ಗಡಿಗಳಲ್ಲಿ ಜನರು ಕಡಿಮೆಯಾಗಲು ಕಾರಣವಾಗಿದೆ. ಪಂಚಾಯತ್‌ಗಳಲ್ಲಿ ಸಂಘಟನೆಗಾಗಿ ಇಲ್ಲಿನವರು ಹೋಗಿದ್ದಾರೆ. ಅವರು ಮತ್ತೆ ವಾಪಸ್ ಬರಲಿದ್ದಾರೆ ಎಂದು ಭಾರತೀಯ ಕಿಸಾನ್ ಯೂನಿಯನ್ ಏಕ್ತಾ (ಡಕೌಡಾ) ಪ್ರಧಾನ ಕಾರ್ಯದರ್ಶಿ ಜಗಮೋಹನ್ ಸಿಂಗ್ ತಿಳಿಸಿದ್ದಾರೆ.

ಪ್ರತಿ ಹಳ್ಳಿಯಿಂದ ಜನರು ಸರದಿಯಲ್ಲಿ ದೆಹಲಿಗೆ ಬರುತ್ತಿದ್ದಾರೆ. ಕಾಯ್ದೆಗಳ ಕುರಿತು ಸರ್ಕಾರದ ಜೊತೆ ಮಾತುಕತೆ ಪ್ರಗತಿಯಾಗುತ್ತಿಲ್ಲ. ಹೀಗಾಗಿ ರೈತರು ಬೇಸಿಗೆಯಲ್ಲೂ ಪ್ರತಿಭಟನೆ ನಡೆಸಲಿದ್ದಾರೆ ಎಂದು ಬಿಕೆಯು (ಲಖೊವಲ್) ಪ್ರಧಾನ ಕಾರ್ಯದರ್ಶಿ ಪರಮ್‌ಜಿತ್ ಸಿಂಗ್ ಹೇಳಿದ್ದಾರೆ.

ನಾವು ಬಿಸಿಲು ಸಹಿಸಲಾಗದೇ ವಾಪಸ್ ಹೋಗುತ್ತೇವೆ ಎಂದು ಸರ್ಕಾರ ಭಾವಿಸಿದೆ. ಆದರೆ, ಹಲವಾರು ಸಂಘಟನೆಗಳು ಹಾಗೂ ಅನಿವಾಸಿ ಭಾರತೀಯ ಸ್ನೇಹಿತರು ನೆರವು ನೀಡುತ್ತಿದ್ದಾರೆ. ನಾವು ಟೆಂಟ್ ಹಾಗೂ ಕೂಲರ್ ಅಳವಡಿಸಿಕೊಂಡು ಬಿಸಿಲು ಎದುರಿಸುತ್ತೇವೆ ಎಂದು ಸಿಂಗ್ ತಿಳಿಸಿದ್ದಾರೆ.

error: Content is protected !!