ಇಲ್ಲವಾದಲ್ಲಿ ಕಾನೂನು ಕ್ರಮ : ಡಿಸಿ
ದಾವಣಗೆರೆ, ಫೆ.15- ಅನರ್ಹರು ಹೊಂದಿರುವ ಆದ್ಯತಾ (ಬಿಪಿಎಲ್)ವರ್ಗದ ಪಡಿತರ ಚೀಟಿಗಳನ್ನು ರದ್ದುಪಡಿಸಲು ಅವಕಾಶ ಕಲ್ಪಿಸಲಾಗಿದ್ದು, ರದ್ದು ಪಡಿಸದೇ ಹೋದಲ್ಲಿ ಕಾನೂನು ರೀತ್ಯಾ ಕ್ರಮ ವಹಿಸಲಾಗುವುದು.
ಸರ್ಕಾರಿ ನೌಕರರು ವೇತನವನ್ನು ಗಣನೆಗೆ ತೆಗೆದು ಕೊಳ್ಳದೆ ಎಲ್ಲಾ ಖಾಸಗಿ ನೌಕರರು, ಸರ್ಕಾರಿ ಅನುದಾನಿತ ನೌಕರರು, ನಿಗಮಗಳು, ಮಂಡಳಿಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ಇತ್ಯಾದಿ ಒಳಗೊಂಡಂತೆ ಆದಾಯ ತೆರಿಗೆ, ಸೇವಾ ತೆರಿಗೆ, ವ್ಯಾಟ್ ವೃತ್ತಿ ತೆರಿಗೆ ಪಾವತಿಸುವ ಎಲ್ಲಾ ಕುಟುಂಬ ಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ 3 ಹೆಕ್ಟೇರ್ ಒಣ ಭೂಮಿ ಅಥವಾ ತತ್ಸಮಾನ ನೀರಾವರಿ ಭೂಮಿ ಹೊಂದಿ ರುವ ಕುಟುಂಬಗಳು, ನಗರ ಪ್ರದೇಶದಲ್ಲಿ 1000 ಚದರ ಅಡಿಗಿಂತಲೂ ಹೆಚ್ಚಿನ ವಿಸ್ತೀರ್ಣದ ಪಕ್ಕಾ ಮನೆಯನ್ನು ಸ್ವಂತವಾಗಿ ಹೊಂದಿರುವವರು ಮತ್ತು ಜೀವನೋಪಾಯ ಕ್ಕಾಗಿ ಸ್ವತಃ ಓಡಿಸುವ ವಾಣಿಜ್ಯ ವಾಹನಗಳಾದ ಟ್ರ್ಯಾಕ್ಟರ್, ಮ್ಯಾಕ್ಸಿಕ್ಯಾಬ್, ಟ್ಯಾಕ್ಸಿ ಇತ್ಯಾದಿಗಳನ್ನು ಹೊಂದಿರುವ ಕುಟುಂಬಗಳ ವಾರ್ಷಿಕ ಆದಾಯ ರೂ 1.20 ಲಕ್ಷಕ್ಕಿಂತಲೂ ಹೆಚ್ಚು ಇರುವ ಕುಟುಂಬಗಳು, ಒಂದೇ ಕುಟುಂಬದಲ್ಲಿದ್ದು ಒಟ್ಟಿಗೆ ವಾಸಿಸುತ್ತಿದ್ದರೂ ಪ್ರತ್ಯೇಕ ಪಡಿತರ ಚೀಟಿ ಹೊಂದಿರುವವರು ಬಿಪಿಎಲ್ ಪಡಿತರ ಚೀಟಿಗಳನ್ನು ಹೊಂದಿರುವುದು ಕಾನೂನು ಬಾಹಿರವಾಗಿರುತ್ತದೆ.
ಅನರ್ಹರು ತಾವು ಹೊಂದಿರುವ ಆದ್ಯತಾ (ಬಿಪಿಎಲ್) ವರ್ಗದ ಪಡಿತರ ಚೀಟಿಗಳನ್ನು ತಾಲ್ಲೂಕು ಕಚೇರಿಯಲ್ಲಿರುವ ಆಹಾರ ಶಿರಸ್ತೇದಾರ್ ಅಥವಾ ಆಹಾರ ನಿರೀಕ್ಷಕರುಗಳನ್ನು ಸಂಪರ್ಕಿಸಿ ತಾವು ಹೊಂದಿರುವ ಆದ್ಯತಾ (ಬಿಪಿಎಲ್) ವರ್ಗದ ಪಡಿತರ ಚೀಟಿಗಳನ್ನು ಆದ್ಯತಾ (ಬಿಪಿಎಲ್) ಚೀಟಿಗಳನ್ನು ರದ್ದುಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಗಿದೆ.
ಹೀಗೆ ತಾವೇ ಸ್ವತಃ ಪಡಿತರ ಚೀಟಿಗಳನ್ನು ಹಿಂತಿರುಗಿಸಿದವರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳಲಾಗುವುದಿಲ್ಲ. ನಂತರ ಇಲಾಖೆಯೇ ಕಾರ್ಯಚರಣೆ ನಡೆಸಿ ಅನರ್ಹರು ಹೊಂದಿರುವ ಆದ್ಯತಾ (ಬಿಪಿಎಲ್) ವರ್ಗದ ಪಡಿತರ ಚೀಟಿ ಗಳನ್ನು ಪತ್ತೆ ಹಚ್ಚಿದಲ್ಲಿ, ಪತ್ತೆ ಹಚ್ಚಿದ ದಿನಾಂಕದವರೆಗೆ ತಾವು ಪಡೆದ ಪಡಿತರ ಪದಾರ್ಥಗಳವಾರು ಪ್ರತಿ ಕೆ.ಜಿ.ಗೆ ಮುಕ್ತ ಮಾರುಕಟ್ಟೆ ಬೆಲೆಯ ಅನುಸಾರ ಹಣವನ್ನು ವಸೂಲಿ ಮಾಡಲಾಗುವುದು. ಜೊತೆಗೆ ದಿ ಕರ್ನಾಟಕ ಪ್ರಿವೆನ್ಷನ್ ಆಫ್ ಅನ್ ಆಥರೈಜ್ಡ್ ಪೊಸೆಷನ್ ಆಫ್ ರೇಷನ್ ಕಾರ್ಡ್ ಆರ್ಡರ್ 1977ರ ರೀತ್ಯಾದ ಪ್ರಕಾರ ಕ್ರಮ ವಹಿಸಲಾಗುವುದು ಮತ್ತು ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
ಈ ಹಿನ್ನೆಲೆಯಲ್ಲಿ ಅನರ್ಹರು ತಾವು ಹೊಂದಿರುವ ಆದ್ಯತಾ (ಬಿಪಿಎಲ್) ವರ್ಗದ ಪಡಿತರ ಚೀಟಿಗಳನ್ನು ಸರ್ಕಾರಕ್ಕೆ ವಾಪಸ್ ನೀಡಿ ಕಾನೂನು ಕ್ರಮದಿಂದ ವಿಮುಕ್ತಿ ಹೊಂದಬೇಕೆಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ತಿಳಿಸಿದ್ದಾರೆ.