ಹೊನ್ನಾಳಿ, ಫೆ.14- ನರಸಿಂಹಯ್ಯ ಸಮಿತಿ ವರದಿಯೊಂದಿಗೆ ಕಾಗೋಡು ತಿಮ್ಮಪ್ಪ ಕಂದಾಯ ಮಂತ್ರಿಯಾದಾಗ ತಮ್ಮ ಅವಧಿಯಲ್ಲಿ ಕಂದಾಯ ಗ್ರಾಮವನ್ನು ಕಾನೂನು ಮೂಲಕ ಘೋಷಿಸಿದ್ದು ನಮ್ಮ ಸರ್ಕಾರವೇ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.
ನ್ಯಾಮತಿ ತಾಲ್ಲೂಕಿನ ಸೂರಗೊಂಡನಕೊಪ್ಪ ಸುಕ್ಷೇತ್ರದ ಸಂತ ಸೇವಾಲಾಲ್ ಜನ್ಮಸ್ಥಾನ ಮಹಾಮಠ್ ಸಮಿತಿ ಮತ್ತು ರಾಜ್ಯ ತಾಂಡಾಭಿವೃದ್ದಿ ನಿಗಮ, ಬೆಂಗಳೂರು ಸಂತ ಸೇವಾಲಾಲ್ ಕ್ಷೇತ್ರ ಅಭಿವೃದ್ಧಿ ಮತ್ತು ನಿರ್ವಹಣಾ ಪ್ರತಿಷ್ಠಾನದ ವತಿಯಿಂದ ಸಂತ ಸೇವಾಲಾಲ್‍ರವರ 282ನೇ ಜಯಂತಿಯ ಉದ್ಘಾಟನಾ ಕಾರ್ಯಕ್ರಮಲ್ಲಿ ಅವರು ಮಾತನಾಡಿದರು.
ಕಂದಾಯ ಗ್ರಾಮ ಮಾಡಲು ಮಾಜಿ ಸಚಿವ ಶಿವಮೂರ್ತಿ ನಾಯ್ಕರವರೇ ಮೊದಲು ನಮಗೆ ಒತ್ತಾಯಿಸಿದ್ದು, ಮೈಸೂರಿನಲ್ಲಿ ವಿದ್ಯಾಭ್ಯಾಸ ಮಾಡುವಂದಿನಿಂದಲೂ ಸ್ನೇಹಿತರ ಸಲುಗೆ ಇದ್ದು, ಇದೀಗ ಯಾರೇ ತಾವು ಎಂದು ಹೇಳಿಕೊಂಡರು ಅದು ಸುಳ್ಳು. ಶಿವಮೂರ್ತಿಯವರೇ ಒತ್ತಾಯಿಸಿದವರಲ್ಲಿ ಮೊದಲಿಗರು ಎಂದರು.
ಇದೀಗ ಕಂದಾಯ ಗ್ರಾಮ ಘೋಷಣೆಯಾಗು ತ್ತಿಲ್ಲ. ರಾಜೀವ್‌ರವರು ಇದನ್ನು ಮನಗಂಡು, ಅದು ಆಗಲೇಬೇಕು ಎಂಬುದು ನಮ್ಮ ಒತ್ತಾಯವಾಗಿದ್ದು ವಿಧಾನ ಸಭೆಯಲ್ಲಿ ಮುಂದಿನ ದಿನಗಳಲ್ಲಿ ನಿಮ್ಮ ಪರ ಒತ್ತಾಯಿಸುವೆ ಎಂದರು.
ಸಂತ ಸೇವಾಲಾಲ್ ಅವರು ಜನರು ನಾಗರಿಕರಾಗಿ ಬೆಳೆಯುವಂತೆ ಸಂದೇಶ ನೀಡಿದವರಾಗಿದ್ದು, ಸಮಾಜದ ಮುಖಂಡರಾದ ಪರಮೇಶ್, ಭೀಮಾನಾಯ್ಕ, ಶಿವಮೂರ್ತಿ, ರಾಜೀವ್ ನಮ್ಮ ಸರ್ಕಾರದ ಅವಧಿಯಲ್ಲಿ ಶಾಸಕರಾಗಿದ್ದಾಗ ಸಮಾಜದ ಪ್ರಗತಿಗೆ ಮನವಿ ಮಾಡಿದ್ದನ್ನು ವಿವರಿಸಿದರು.
2015 ರ ಸೇವಾಲಾಲ್ ಜಯಂತಿಗೆ ತಾವು ಬಂದಿದ್ದು ಅನುದಾನ ಕೇಳಿಕೊಂಡಿದ್ದ ಮೇರೆಗೆ ವಿವಿಧ ಅಭಿವೃದ್ದಿಗೆ ಒಟ್ಟು 50 ಕೋಟಿ ರೂ. ಗಳನ್ನು ನೀಡಿ ಸುಕ್ಷೇತ್ರದ ಅಭಿವೃದ್ದಿಗೆ ಹಣ ಮಂಜೂರು ಮಾಡಿದ್ದನ್ನು ವಿವರಿಸಿದರು.
ಸಮಾಜದ ಎಲ್ಲಾ ಜನಾಂಗಗಳ ಅಭಿವೃದ್ಧಿ ಮತ್ತು ಜಾಗೃತಿಗಾಗಿ 1996 ರಲ್ಲಿ ಸರ್ಕಾರದಿಂದ ಜಯಂತಿ ಆಚರಿಸುವಂತೆ ಘೋಷಣೆ ಮಾಡಿದ್ದು ತಮ್ಮ ಸರ್ಕಾರ ಎಂದು ಸ್ಪಷ್ಟ ಪಡಿಸಿದರು.
ಮಾಜಿ ಸಚಿವ ಶಿವಮೂರ್ತಿನಾಯ್ಕ ಅವರು ಮುಖ್ಯಮಂತ್ರಿ ಬಿಎಸ್‍ವೈ ಮಾತನಾಡುವ ಸಂದರ್ಭದಲ್ಲಿ ರಸ್ತೆ, ರೈಲ್ವೆ ಅನುದಾನಕ್ಕಿಂತ ಮುಖ್ಯವಾಗಿ ಮೆಡಿಕಲ್ ಕಾಲೇಜು ಸ್ಥಾಪಿಸುವಂತೆ ಪ್ರೇಕ್ಷಕ ಸ್ಥಳದಲ್ಲಿ ಪ್ರಶ್ನಿಸಿದ್ದನ್ನು ಸಭೆ ಗಮನಕ್ಕೆ ತಂದಾಗ ಅದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯನವರು, ಮೆಡಿಕಲ್ ಕಾಲೇಜು ಈ ಸರ್ಕಾರದಲ್ಲಿ ಆಗಲೇ ಬೇಕು ಎಂದು ತಮ್ಮ ಒತ್ತಾಯವಿದ್ದು ಆಗದೇ ಇದ್ದಲ್ಲಿ, ಈ ಕಾರ್ಯವನ್ನು ಮುಂದೆ ನಮ್ಮ ಸರ್ಕಾರ ಬಂದಾಗ ಕ್ಷೇತ್ರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪಿಸುವುದಾಗಿ ಭರವಸೆ ನೀಡಿದರು.
ಸಭೆಯಲ್ಲಿ ಮಾಜಿ ಸಚಿವ ಹಾಗೂ ಶಾಸಕ ಪಿ.ಟಿ.ಪರಮೇಶನಾಯ್ಕ, ಹಗರಿಬೊಮ್ಮನಹಳ್ಳಿ ಶಾಸಕ ಭೀಮಾನಾಯ್ಕ, ತಾಂಡಾಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್, ಶಿವಮೊಗ್ಗ ಗ್ರಾಮಾಂತರ ಶಾಸಕ ಅಶೋಕನಾಯ್ಕ, ದ್ಯಾಮನಾಯ್ಕ, ಈಶ್ವರನಾಯ್ಕ, ಮಾಜಿ ಶಾಸಕ ಡಿ.ಜಿ.ಶಾಂತನಗೌಡ, ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಎಚ್.ಬಿ.ಮಂಜಪ್ಪ, ಎಚ್.ಎ.ಉಮಾಪತಿ, ಶೇಷಾದ್ರಿ, ಬಾಲರಾಜ್, ಅನಿತಾಕುಮಾರಿ, ವೀರೇಶ್‌ನಾಯ್ಕ, ರಾಮಪ್ಪ ಲಂಬಾಣಿ, ದುದ್ಯಾನಾಯ್ಕ ಉಪಸ್ಥಿತರಿದ್ದರು.
ಮೃತ್ಯುಂಜಯ ಪಾಟೀಲ್