ದಾವಣಗೆರೆ, ಫೆ.4- ಕೊರೊನಾ ವಾರಿಯರ್ಸ್ಗಳಾಗಿ ಕೆಲಸ ನಿರ್ವಹಿಸಿ ಮೃತಪಟ್ಟ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಸರ್ಕಾರ 30 ಲಕ್ಷ ರೂ. ನೀಡುವಂತೆ ಹೇಳಿದೆಯಾದರೂ, ಇದುವರೆಗೂ ಯಾರಿಗೂ ಹಣ ದೊರೆತಿಲ್ಲ ಎಂದು ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಫೆಡರೇಷನ್ ಅಧ್ಯಕ್ಷ ಹೆಚ್.ಕೆ. ರಾಮಚಂದ್ರಪ್ಪ ಹೇಳಿದರು.
ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 36 ಹಾಗೂ ಜಿಲ್ಲೆಯಲ್ಲಿ 6 ಅಂಗನವಾಡಿ ಕಾರ್ಯಕರ್ತೆಯರು ಕೋವಿಡ್ನಿಂದಾಗಿ ಮೃತಪಟ್ಟಿದ್ದಾರೆ. ಅವರಿಗೂ ಈ ಕೂಡಲೇ ಸರ್ಕಾರ ಹಣ ಬಿಡುಗಡೆ ಮಾಡಬೇಕು ಎಂದರು.
ಮಕ್ಕಳೇ ದೇವರು ಎಂದು ಹೇಳಲಾಗುತ್ತದೆ. ಆದರೆ ಅಂತಹ ಮಕ್ಕಳಿಗೆ ಅಂಗನವಾಡಿಯಲ್ಲಿ ಕಳಪೆ ಆಹಾರ ಪೂರೈಕೆ ಮಾಡಲಾಗುತ್ತದೆ. ಮಕ್ಕಳು, ಗರ್ಭಿಣಿ, ಬಾಣಂತಿಯರು ಕಳಪೆ ಆಹಾರ ಬಳಸುತ್ತಿರುವುದರಿಂದ ಅಪೌಷ್ಠಿಕತೆ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ 40,33,581 ಮಕ್ಕಳು ಅಂಗನವಾಡಿ ಕೇಂದ್ರಗಳಿಗೆ ಬರುತ್ತಿದ್ದಾರೆ. ಸರ್ವೇ ಪ್ರಕಾರ 62,199 ಮಕ್ಕಳು ಅಪೌಷ್ಠಿಕತೆಯಿಂದ ಬಳಲುತ್ತಿದ್ದಾರೆ ಎಂದು ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಈ ಬಗ್ಗೆ ಗಮನ ಹರಿಸಬೇಕು ಎಂದು ಆಗ್ರಹಿಸಿದರು.
ಅಂಗವಾಡಿ ಕಾರ್ಯಕರ್ತೆಯರಿಗೆ ಬೆಳಿಗ್ಗೆ 9.30 ರಿಂದ ಸಂಜೆ 4ರವರೆಗೆ ಮಾತ್ರ ಕೆಲಸದ ಅವಧಿ ಎಂದು ನಿಗದಿಗೊಳಿಸಿ ಸರ್ಕಾರ ಆದೇಶಿಸಿದೆ. ಆದರೆ ನಿಗದಿತ ವೇಳೆಯ ನಂತರವೂ ಕೆಲಸ ಮಾಡಿಸಿಕೊಳ್ಳಲಾಗುತ್ತಿದೆ. ಇದು ಸಲ್ಲದು ಎಂದ ಅವರು, ಸರ್ವೀಸ್ ಆಧಾರದ ಮೇಲೆ ಅಂಗನವಾಡಿ ಕಾರ್ಯಕರ್ತೆಯರಿಗೆ ವೇತನ ನೀಡಬೇಕು ಎಂದರು.
ನಿವೃತ್ತಿಯಾದ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕನಿಷ್ಟ 5 ಸಾವಿರ ರೂ. ಪಿಂಚಣಿ ನೀಡಬೇಕು.ಕೇಂದ್ರ ಸರ್ಕಾರದ ಘೋಷಣೆಯಂತೆ ಕನಿಷ್ಟ 18 ಸಾವಿರ ರೂ. ವೇತನ ಜಾರಿಗೆ ತರಬೇಕು.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಯಾವ ಉದ್ದೇಶಕ್ಕಾಗಿ ನೇಮಿಸಲಾಗಿದೆಯೋ ಅದು ಬಿಟ್ಟು ಬೇರೆ ಉದ್ದೇಶಕ್ಕೆ ಬಳಸಿಕೊಳ್ಳಬಾರದೆಂದು ಹೈಕೋರ್ಟ್ ಒಪ್ಪಿಕೊಂಡಿರುವುದನ್ನು ಸರ್ಕಾರ ಶೀಘ್ರವೇ ಜಾರಿಗೆ ತರಬೇಕು ಎಂದು ರಾಮಚಂದ್ರಪ್ಪ ಹೇಳಿದರು.
ಈ ಎಲ್ಲಾ ಬೇಡಿಕೆಗಳನ್ನಿಟ್ಟು ಹೋರಾಟ ನಡೆಸುವ ಸಂಬಂಧ ಇದೇ ಫೆ.7 ರಂದು ಬೆಂಗಳೂರಿನ ಎಐಟಿಯುಸಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿ, ಮಾರ್ಚ್ ವೇಳೆಗೆ ರಾಜ್ಯಾದ್ಯಂತ ತೀವ್ರ ಹೋರಾಟ ನಡೆಸಲಾಗುವುದು ಎಂದು ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಆವರಗೆರೆ ವಾಸು, ಆವರಗೆರೆ ಚಂದ್ರು, ಎನ್.ಹೆಚ್. ರಾಮಪ್ಪ, ಸುರೇಶ್, ವಿಶಾಲಾಕ್ಷಿ, ಎಸ್.ಎಸ್. ಮಲ್ಲಮ್ಮ, ಜಿ.ರೇಣುಕಮ್ಮ, ಸುಶೀಲಮ್ಮ, ಸಿ.ಬಿ. ಕಾಳಮ್ಮ, ಭರಮಕ್ಕ, ಸರೋಜಮ್ಮ ಇತರರು ಉಪಸ್ಥಿತರಿದ್ದರು.