ದಾವಣಗೆರೆ, ಜ.22- ಬೆಳಗಾವಿ ಮಹಾರಾಷ್ಟ್ರದ್ದು ಎಂದು ಉದ್ಧಟತನದ ಹೇಳಿಕೆ ನೀಡಿರುವ ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕರ್ನಾಟಕದ ಮರಾಠ ಜನಾಂಗದಿಂದ ಧಿಕ್ಕಾರ ಎಂದು ಭಾವಸಾರ ಕ್ಷತ್ರಿಯ ಸಮಾಜದ ರಾಷ್ಟ್ರೀಯ ಅಧ್ಯಕ್ಷರೂ ಆದ ಕೈಗಾರಿಕೋದ್ಯಮಿ ಜಯಪ್ರಕಾಶ್ ಯು. ಅಂಬರ್ಕರ್ ಕಿಡಿ ಕಾರಿದ್ದಾರೆ.
1956ನೇ ವರ್ಷದಲ್ಲಿ ಆದ ವಿಭಜನೆ ಎರಡು ರಾಜ್ಯದ ಒಪ್ಪಿಗೆ ಮೇರೆಗೆ ಆಗಿದೆ. ಕರ್ನಾಟಕದಲ್ಲಿ ಒಂದು ಕೋಟಿ ಮರಾಠಿ ಮಾತನಾಡುವ ಜನ ಮಹಾರಾಷ್ಟ್ರದಿಂದ ವಲಸೆ ಬಂದವರಿದ್ದಾರೆ. ಅವರಲ್ಲಿ ಶಿವಾಜಿ ಮರಾಠ, ಭಾವಸಾರ ಕ್ಷತ್ರಿಯ ಸಮಾಜ, ನಾಮದೇವ ಸಿಂಪಿ, ಸ್ವಕುಳಸಾಳಿ ಮತ್ತು ಹಲವು ಪಂಗಡಗಳು 16ನೇ ಶತಮಾನದಲ್ಲಿ ಷಹಾಜಿ ಮಹಾರಾಜರು ಲಕ್ಷಾಂತರ ಸೈನಿಕರೊಂದಿಗೆ ಬಿಜಾಪುರಕ್ಕೆ ವಲಸೆ ಬಂದರು. ಅಲ್ಲಿಂದ ಕರ್ನಾಟಕದ ಎಲ್ಲಾ ಭಾಗಗಳಿಗೆ ಹೋಗಿ ನೆಲೆಸಿದರು. ಭಾವಸಾರ ಕ್ಷತ್ರಿಯ ಸಮಾಜದ ಇಪ್ಪತ್ತು ಲಕ್ಷ ಜನಸಂಖ್ಯೆ ಟೈಲರ್ ವೃತ್ತಿಯಲ್ಲಿ ಕನ್ನಡಿಗರಿಗೆ ಸಹಕಾರ ನೀಡುತ್ತಿದ್ದಾರೆ. ಅದೇ ರೀತಿ ಬೇರೆ ಬೇರೆ ವೃತ್ತಿಯವರು ಅವರು ತಮ್ಮ ತಮ್ಮ ಕೆಲಸ ಮಾಡುತ್ತಾ ಸಹಕಾರದೊಂದಿಗೆ ಜೀವನ ನಡೆಸುತ್ತಿದ್ದಾರೆ ಎಂದವರು ಹೇಳಿದ್ದಾರೆ.
400 ವರ್ಷಗಳ ಇತಿಹಾಸದಲ್ಲಿ ಒಂದೇ ಒಂದು ಸಾರಿ ಕೂಡ ಕನ್ನಡಿಗರು ಮಹಾರಾಷ್ಟ್ರದ ಜನತೆಯ ಮೇಲೆ ದಬ್ಬಾಳಿಕೆ ಮಾಡಿಲ್ಲ ಅಂದರೆ ಅವರ ಒಳ್ಳೆಯ ಮನಸ್ಥಿತಿ ಇಲ್ಲಿ ಗೊತ್ತಾಗುತ್ತದೆ.
ಹೀಗಿರುವಾಗ 60 ವರ್ಷದ ನಂತರ ಉದ್ಧವ್ ಠಾಕ್ರೆ ಅವರು ಮಾಡಿರುವ ಘೋಷಣೆ ಉದ್ಧಟತನದ್ಧಾಗಿದೆ. ಇನ್ನಾದರೂ ಇಂತಹ ಹೇಳಿಕೆಯನ್ನು ನೀಡಿ ಕರ್ನಾಟಕದಲ್ಲಿ ನೆಲೆಸಿರುವ ಮರಾಠ ಜನಾಂಗಕ್ಕೆ ತೊಂದರೆ ಕೊಡಬೇಡಿ ಎಂದು ಜಯಪ್ರಕಾಶ್ ಮನವಿ ಮಾಡಿದರು.