ಪೋಷಕರು, ತೃತೀಯ ಲಿಂಗಿಗಳ ಪ್ರತಿಭಟನೆ
ದಾವಣಗೆರೆ, ಜ.3- ಮಗು ಅದಲು-ಬದಲಾದ ಕಾರಣ ಪೋಷಕರು, ತೃತೀಯ ಲಿಂಗಿಗಳು ಜಿಲ್ಲಾಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ ಘಟನೆ ಇಂದು ನಡೆದಿದೆ.
ಬಳ್ಳಾರಿ ಜಿಲ್ಲೆ ಕೂಡ್ಲಿಗೆ ತಾಲ್ಲೂಕು ಮಾಕನಡುಕು ಗ್ರಾಮದ ವಾಸಿ ನಾಗರಾಜ್-ಮಾರಕ್ಕ ದಂಪತಿಗೆ ಮೊದಲು ಗಂಡು ಮಗು ಆಗಿದೆ ಎಂಬುದಾಗಿ ತಿಳಿಸಿದ್ದ ಆಸ್ಪತ್ರೆಯ ಸಿಬ್ಬಂದಿ, ಎರಡು ಗಂಟೆ ನಂತರ ಮಗುವನ್ನು ಕೊಟ್ಟಿದ್ದರು. ಆ ನಂತರ ಬಂದು ನಿಮಗೆ ಆಗಿರುವುದು ಹೆಣ್ಣು ಮಗು. ಅದು ಐಸಿಯುನಲ್ಲಿದ್ದು, ಈ ಮಗು ನಿಮ್ಮದಲ್ಲ ಎಂದು ಹೇಳಿ ಗಂಡು ಮಗುವನ್ನು ಕೊಂಡೊಯ್ದಿದ್ದಾರೆ ಎನ್ನಲಾಗಿದೆ.
ಇದರಿಂದ ಅಸಮಾಧಾನಗೊಂಡ ಪೋಷಕರು ಮತ್ತು ಅವರಿಗೆ ಪರಿಚಯಸ್ಥ ತೃತೀಯ ಲಿಂಗಿಗಳು ಗಂಡು ಮಗುವನ್ನು ವಾಪಾಸ್ ಕೊಡುವಂತೆ ಆಗ್ರಹಿಸಿ ಪ್ರತಿಭಟಿಸಿ ದ್ದಾರೆ. ಆಸ್ಪತ್ರೆಯಲ್ಲಿ ಮಗು ಮಾರಾಟ ಜಾಲ ಇದೆ ಎಂದು ಆರೋಪಿಸಿ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕಿಳಿದರು.
ಸ್ಥಳಕ್ಕಾಗಮಿಸಿದ ಜಿಲ್ಲಾಸ್ಪತ್ರೆ ಅಧೀಕ್ಷಕರು, ನಾರಮ್ಮ ಮತ್ತು ಮಾರಮ್ಮ ಹೆಸರು ಕೇಳಿಸಿಕೊಳ್ಳುವಾಗ ಆದ ಎಡವಟ್ಟಿನಿಂದ ಮಗು ಅದಲು-ಬದಲಾಗಿದೆ. ಮಾರಮ್ಮನಿಗೆ ಮಗು ಜನಿಸಿದ ಸಮಯದಲ್ಲೇ ಹೊಸಪೇಟೆ ತಾಲ್ಲೂಕು ಮರಿಯಮ್ಮನಹಳ್ಳಿ ದಂಪತಿ ನಾರಮ್ಮ-ವೆಂಕಟೇಶ್ಗೆ ಗಂಡು ಮಗು ಜನಿಸಿದ್ದು, ಹೆರಿಗೆಯಾದ ನಂತರ ತಾಯಿ ಹೆಸರು ನಾರಮ್ಮ ಎಂದು ಕೂಗಿದ್ದನ್ನೇ ಮಾರಮ್ಮ ಎಂಬುದಾಗಿ ಕೇಳಿಸಿಕೊಂಡಿದ್ದರಿಂದ ಗೊಂದಲವಾಗಿದೆ ಎಂದು ಸಮಜಾಯಿಷಿ ನೀಡುವ ಮೂಲಕ ಪ್ರಕರಣ ಸುಖಾಂತ್ಯ ಕಂಡಿದೆ.