ಎಸ್‌ಬಿಐ ಬ್ಯಾಂಕ್‌ ಕಳ್ಳತನ ಪ್ರಕರಣ : ಐವರ ಬಂಧನ

ನ್ಯಾಮತಿ, ಮಾ. 27 – ಪಟ್ಟಣದ ಭಾರತೀಯ ಸ್ಟೇಟ್‌ ಬ್ಯಾಂಕ್‌ನ (ಎಸ್‌ಬಿಐ) ನೆಹರೂ ರಸ್ತೆಯ ಶಾಖೆಯಲ್ಲಿ 6 ತಿಂಗಳ ಹಿಂದೆ ನಡೆದಿದ್ದ 17 ಕೆ.ಜಿ 705 ಗ್ರಾಂ ಚಿನ್ನಾಭರಣ ಕಳವು ಪ್ರಕರಣ ಭೇದಿಸಿರುವ ಪೊಲೀಸರು, ತಮಿಳುನಾಡಿನ ಇಬ್ಬರು ಸೇರಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.

ತಮಿಳುನಾಡಿನ ವಿಜಯಕುಮಾರ್‌, ಅಜಯಕುಮಾರ್‌, ಹೊನ್ನಾಳಿಯ ಅಭಿಷೇಕ್‌, ಚಂದ್ರಶೇಖರ್‌ ಹಾಗೂ ನ್ಯಾಮತಿಯ ಮಂಜುನಾಥ್‌ ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ತಮಿಳುನಾಡಿನ ಪರಮಾನಂದ ಬಂಧನಕ್ಕೆ ಹುಡುಕಾಟ ನಡೆಯುತ್ತಿದೆ. ಬಂಧಿತರಿಂದ 220 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಅವರು ಗುರುವಾರ ಮಾಹಿತಿ ನೀಡಿದರು.

ತಮಿಳುನಾಡಿನ ಮೂವರು ಹಲವು ವರ್ಷಗಳಿಂದ ನ್ಯಾಮತಿಯಲ್ಲಿ ನೆಲೆಸಿದ್ದರು. ಬೇಕರಿಯೊಂದನ್ನು ಇಟ್ಟುಕೊಂಡು ಜೀವನ ನಡೆಸುತ್ತಿದ್ದರು. 

ತಾಂತ್ರಿಕ ಸಾಕ್ಷ್ಯಗಳ ಆಧಾರದ ಮೇರೆಗೆ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕೃತ್ಯ ಬಯಲಿಗೆ ಬಂದಿದೆ. ಬುಧವಾರ ರಾತ್ರಿ ಬಂಧನ ಪ್ರಕ್ರಿಯೆ ಪೂರ್ಣಗೊಳಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಯುತ್ತಿದೆ. ಉಳಿದ ಚಿನ್ನಾಭರಣ ಎಲ್ಲಿದೆ ಎಂಬುದರ ಬಗ್ಗೆಯೂ ತನಿಖೆ ನಡೆಯುತ್ತಿದೆ’ ಎಂದರು.

ನ್ಯಾಮತಿ ಪಟ್ಟಣದ ಎಸ್‌ಬಿಐ ಶಾಖೆಯಲ್ಲಿ ಕಳೆದ ಅ.26ರಂದು ಕಳವು ನಡೆದಿತ್ತು. ಕಿಟಕಿ ಮುರಿದು ಒಳನುಗ್ಗಿದ ಕಳ್ಳರು ಲಾಕರ್‌ನಲ್ಲಿ ಇಟ್ಟಿದ್ದ ಚಿನ್ನಾಭರಣ ದೋಚಿದ್ದರು. ಚಿನ್ನಾಭರಣ ಅಡವಿಟ್ಟು ಸಾಲ ಪಡೆದಿದ್ದ 509 ಗ್ರಾಹಕರು ಆಭರಣ ಕಳೆದುಕೊಂಡಿದ್ದರು.

error: Content is protected !!