ದಾವಣಗೆರೆ, ಮಾ.21- ಮಾನವ ಬಂಧುತ್ವ ವೇದಿಕೆ, ದಲಿತ ಕಲಾ ಮಂಡಳಿ ಹಾಗೂ ಭಾರತೀಯ ಜನ ಕಲಾ ಸಮಿತಿ ಸಹಯೋಗದಲ್ಲಿ ನಾಳೆ ದಿನಾಂಕ 22 ಹಾಗೂ 23ರಂದು ಹರಿಹರದ ಪ್ರೊ.ಬಿ. ಕೃಷ್ಣಪ್ಪ ಭವನದಲ್ಲಿ `ಹೋರಾಟದ ಹಾಡುಗಳ ಕಮ್ಮಟ’ ಹಮ್ಮಿಕೊಂಡಿರುವುದಾಗಿ ಮಾನವ ಬಂಧುತ್ವ ವೇದಿಕೆಯ ಡಾ.ಎ.ಬಿ. ರಾಮಚಂದ್ರಪ್ಪ ತಿಳಿಸಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಿವಿಧ ಜಿಲ್ಲೆಗಳಲ್ಲಿ ಹೋರಾಟದ ಹಾಡು ಹೇಳುವ ಹಿರಿಯರನ್ನು ಒಟ್ಟು ಗೂಡಿಸಿ, ಹೊಸ ತಲೆಮಾರಿನ ಹಾಡುಗಾರರನ್ನು ಸಜ್ಜುಗೊಳಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ ಎಂದರು.
ನಾಳೆ ದಿನಾಂಕ 22ರ ಶನಿವಾರ ಬೆಳಿಗ್ಗೆ 10.30ಕ್ಕೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಹಂಪಿ ವಿವಿಯ ಕನ್ನಡ ಸಾಹಿತ್ಯ ಪ್ರಾಧ್ಯಾಪಕ ಡಾ.ಬಿ.ಎಂ. ಪುಟ್ಟಯ್ಯ ಕಮ್ಮಟದ ಆಶಯ ನುಡಿಗಳನ್ನಾಡಲಿದ್ದಾರೆ. ನಂತರ ಸಂವಾದ, ಚರ್ಚೆಗಳು, ಹೊಸ ಹಾಡುಗಳ ರಚನೆ ಕುರಿತ ಕಾರ್ಯಕ್ರಮಗಳು ನಡೆಯಲಿವೆ. ದಿನಾಂಕ 23ರ ಭಾನುವಾರ ಸಂಜೆ ಸಮಾರೋಪ ಸಮಾರಂಭ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಸಂಚಾಲಕ ಹೆಗ್ಗೆರೆ ರಂಗಪ್ಪ, ಐರಣಿ ಚಂದ್ರು, ಜಗಳೂರು ಓಬಣ್ಣ, ಜಿಗಳಿ ಹಾಲೇಶ್, ಕಗತ್ತೂರು ಮಲ್ಲೇಶ್, ದೀಪು ಆರ್. ಹೆಗ್ಗೇರಿ ಇತರರಿದ್ದರು.