ಮಲೇಬೆನ್ನೂರು, ಮಾ.21- ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಕಟ್ಟಡದಲ್ಲಿ ಶುಕ್ರವಾರ ನಡೆದ ಎಸ್ಸೆಸ್ಸೆಲ್ಸಿ ಪರೀಕ್ಷಾ ಕೇಂದ್ರದಲ್ಲಿ 7 ಪ್ರೌಢಶಾಲೆಗಳ ಎಲ್ಲಾ 264 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು.
ಪರೀಕ್ಷೆ ಆರಂಭಕ್ಕೂ ಮುನ್ನ ಪುರಸಭೆ ಉಪಾಧ್ಯಕ್ಷೆ ಶ್ರೀಮತಿ ವಿಜಯಲಕ್ಷ್ಮಿ ಕೆ.ಪಿ.ಗಂಗಾಧರ್ ಅವರು ವಿದ್ಯಾರ್ಥಿಗಳಿಗೆ ಗುಲಾಬಿ ಹೂವು ನೀಡಿ ಶುಭ ಹಾರೈಸಿದರು.
ಪುರಸಭೆ ಸದಸ್ಯ ಷಾ ಅಬ್ರಾರ್, ಜನತಾ ಬಜಾರ್ ನಿರ್ದೇಶಕ ಪಿ.ಹೆಚ್.ಶಿವಕುಮಾರ್, ಭೋವಿ ಮಂಜಣ್ಣ, ಪರೀಕ್ಷಾ ಕೇಂದ್ರದ ಮುಖ್ಯ ಅಧೀಕ್ಷಕ ಜಗದೀಶ್ ಉಜ್ಜಮ್ಮನವರ್, ಪ್ರಶ್ನೆ ಪತ್ರಿಕೆ ಅಭಿರಕ್ಷಕ ಸಿ.ಜಯ್ಯಣ್ಣ ಮತ್ತು ಎಸ್‌ಡಿಎಂಸಿ ಪದಾಧಿಕಾರಿಗಳು ಈ ವೇಳೆ ಹಾಜರಿದ್ದರು.
ಕುಂಬಳೂರಿನ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 6 ಪ್ರೌಢಶಾಲೆಗಳ 235 ವಿದ್ಯಾರ್ಥಿಗಳು ಮತ್ತು ದೇವರಬೆಳಕೆರೆಯ ಮೈಲಾರ ಲಿಂಗೇಶ್ವರ ಪ್ರೌಢಶಾಲೆಯ ಪರೀಕ್ಷಾ ಕೇಂದ್ರದಲ್ಲಿ 5 ಪ್ರೌಢಶಾಲೆಗಳ 222 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಕೇಂದ್ರದಲ್ಲಿ ನಾಲ್ವರು ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಪರೀಕ್ಷೆಯ ಮೊದಲ ದಿನ ಮಾತೃ ಭಾಷೆಯಾದ ಕನ್ನಡ ವಿಷಯ ಪರೀಕ್ಷೆಯನ್ನು ವಿದ್ಯಾರ್ಥಿಗಳು ಖುಷಿಯಿಂದ ಬರೆದು ಹೊರಗಡೆ ಬಂದ ನಂತರ ಪರೀಕ್ಷೆಯ ಅನುಭವವನ್ನು ತಮ್ಮ ಪೋಷಕರ ಬಳಿ ಹಂಚಿಕೊಂಡರು.