ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಕಳ್ಳನ ಬಂಧಿಸಿದ ಪೊಲೀಸರು

ಹೊನ್ನಾಳಿ, ಮಾ.20- ಹೊನ್ನಾಳಿಯಲ್ಲಿ ಮನೆಯೊಂದನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಪ್ರಕರಣ ದಾಖಲಾಗಿ 48 ಗಂಟೆಗಳಲ್ಲಿ ಬಂಧಿಸಿದ ಪೊಲೀಸರು, 5.50 ಲಕ್ಷ ರೂ. ಮೌಲ್ಯದ ಸ್ವತ್ತು ವಶಕ್ಕೆ ಪಡೆದಿದ್ದಾರೆ.

ಶಿಕಾರಿಪುರ ತಾಲ್ಲೂಕಿನ ಪಿ.ಎಸ್‌. ಶಿವರಾಜ್‌ ಬಂಧಿತ ಆರೋಪಿಯಾಗಿದ್ದು, ಈತನಿಂದ 5.50 ಲಕ್ಷ ರೂ ಮೌಲ್ಯದ 109 ಗ್ರಾಂ ತೂಕದ ಬಂಗಾರದ ವಡವೆಗಳು ಹಾಗೂ ಬೆಳ್ಳಿಯ ಆಭರಣ ಜಪ್ತಿ ಮಾಡಿದ್ದಾರೆ.

ಪಟ್ಟಣದ ನಿವಾಸಿ ಜೆ.ಎಸ್‌. ಸಾಗರೀಕ ಸಂತೋಷ್‌ ಅವರ ಹಂಚಿನ ಮನೆಯ ಹಂಚು ತೆಗೆದು ಕಬೋರ್ಡ್‌ನಲ್ಲಿಟ್ಟಿದ್ದ ಒಟ್ಟು 109 ಗ್ರಾಂ. ತೂಕದ ಬಂಗಾರದ ಒಡವೆಗಳು ಮತ್ತು 25ಗ್ರಾಂ ತೂಕದ ಬೆಳ್ಳಿ ಕಾಲ್ ಚೈನ್ ಕಳ್ಳತನವಾಗಿರುವ ಬಗ್ಗೆ ಸಂತ್ರಸ್ಥರು ಹೊನ್ನಾಳಿ ಠಾಣೆಗೆ ಮಾ.13ರಂದು ದೂರು ನೀಡಿದ್ದರು.

ಇದಕ್ಕೂ ಮೊದಲು ಆರೋಪಿಯ ವಿರುದ್ಧ ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ 2 ಕಳ್ಳತನ ಪ್ರಕರಣಗಳು ದಾಖಲಾಗಿ, ಅವು ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿರುವುದು ತಿಳಿದು ಬಂದಿದೆ.

error: Content is protected !!