ರಾಣೇಬೆನ್ನೂರು, ಮಾ.19- ಜಿಲ್ಲೆಯಾದ್ಯಂತ ಕಾಂಗ್ರೆಸ್ ಶಾಸಕರಿದ್ದರೂ ಸಹ ಬಜೆಟ್‌ನಲ್ಲಿ ಜಿಲ್ಲೆಗೆ ಏನನ್ನೂ ತರಲಿಲ್ಲ, ನಮ್ಮ ಪಕ್ಷದ ಸರ್ಕಾರ ಇದ್ದಾಗ ಮಂಜೂರಾಗಿದ್ದ ಬಡೆಬಸಾಪುರ ಬಳಿಯ ಜವಳಿ ಪಾರ್ಕ್ ಅನ್ನೇ ಮತ್ತೊಮ್ಮೆ ಘೋಷಣೆ ಮಾಡಲಾಗಿದೆ. ಜಿಲ್ಲೆಯಾದ್ಯಂತ ಮಂಜೂರಾಗಿರುವ ನೀರಾವರಿ ಯೋಜನೆಗಳನ್ನು ಪೂರ್ಣಗೊಳಿಸುವ ಯಾವುದೇ ಪ್ರಯತ್ನ ಸರ್ಕಾರದಿಂದ ಆಗಿಲ್ಲ ಎಂದು ಮಾಜಿ ಶಾಸಕ ಹಾವೇರಿ ಬಿಜೆಪಿ ಜಿಲ್ಲಾಧ್ಯಕ್ಷ ಅರುಣಕುಮಾರ್ ಪೂಜಾರ ಟೀಕಿಸಿದರು.
ಬಿಜೆಪಿ ಕಾರ್ಯಾಲಯದಲ್ಲಿ ಇಂದು ಕರೆಯ ಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ ದರು. ಪಕ್ಷದ ಸಂಘಟನೆಯೊಂದಿಗೆ ನಡೆಯುವ ಎಲ್ಲ ಚುನಾವಣೆಗಳ ಗೆಲುವಿಗೆ ನಿರಂತರ ದುಡಿಮೆ ಪಕ್ಷದ ಕಾರ್ಯಕರ್ತರದ್ದಾಗಿದ್ದು, ಸರ್ಕಾರಗಳು ಇದ್ದಾಗ ಅವರಿಗೆ ನಿಗಮ, ಮಂಡಳಿಗಳ ಅಧಿಕಾರ ಹಂಚಿಕೆ ತಪ್ಪಲ್ಲ, ನಿಷ್ಟಾವಂತ ಕಾರ್ಯಕರ್ತರನ್ನು ಗುರುತಿಸಿ ಅಧಿಕಾರ ಹಂಚಿಕೆ ಮಾಡು ವುದು ಎಲ್ಲ ಅವಧಿ ಹಾಗೂ ಎಲ್ಲ ಪಕ್ಷಗಳ ಸರ್ಕಾರಗಳಿಂದ ನಡೆಯುತ್ತಲೇ ಬಂದಿವೆ ಅವರು ಹೇಳಿದರು.
ಶುಶ್ರೂಷಕಿ ಸ್ವಾತಿ ಕೊಲೆ ಸೇರಿ ದಂತೆ ಕಾನೂನು ಬಾಹಿರ ಆಡಳಿತ ಜಿಲ್ಲೆಯಲ್ಲಿದ್ದು, ಇದು ಅಸಂವಿಧಾನಿಕ ಸರ್ಕಾರವಾಗಿದೆ. ಮುಸ್ಲಿಮರ ಪರ ಹಾಗೂ ಹರಿಜನ, ಗಿರಿಜನ, ಹಿಂದುಳಿದವರ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಜನರ ವಿರೋಧಿ ಸರ್ಕಾರವಾಗಿದೆ ಎಂದು ಆರೋಪಿಸಿದರು.
ಗೋಷ್ಠಿಯಲ್ಲಿ ನಗರಸಭೆ ಉಪಾಧ್ಯಕ್ಷ ನಾಗರಾಜ ಪವಾರ, ಸದಸ್ಯರಾದ ಪ್ರಕಾಶ ಪೂಜಾರ, ರಮೇಶ ನಿಂಗರಾಜ ಕೋಡಿಹಳ್ಳಿ, ಮಲ್ಲಪ್ಪ ಅಂಗಡಿ, ಬಸವರಾಜ ಚಳಗೇರಿ, ಸಿದ್ದು ಚಿಕ್ಕಬಿದರಿ, ರಾಯಪ್ಪ ಮಾಕನೂರ, ಪವನ ಮಲ್ಲಾಡದ, ಮಾಳಪ್ಪ ಪೂಜಾರ ಮತ್ತಿತರರು ಇದ್ದರು.