ದಾವಣಗೆರೆ, ಮಾ. 19- ಯಾವುದೇ ನೆಪ ಹೇಳದೇ ಏಪ್ರಿಲ್ ತಿಂಗಳಲ್ಲಿ ನಡೆಯುವ ಅಂಬೇಡ್ಕರ್ ಜಯಂತಿ ದಿನದಂದೇ ಅಂಬೇಡ್ಕರ್ ಭವನದ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ ಮಾಡಲೇ ಬೇಕೆಂದು ಆಗ್ರಹಿಸಿ ಏ.1 ರಿಂದ ನಗರದ ಮಹಾನಗರ ಪಾಲಿಕೆ ಮುಂಭಾಗ ಅನಿರ್ದಿಷ್ಟಾವಧಿ ಮುಷ್ಕರವನ್ನು ಹಮ್ಮಿಕೊಳ್ಳಲಾಗುವುದು ಎಂದು ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್ ಭವನ ನಿರ್ಮಾಣ ಹೋರಾಟ ಸಮಿತಿಯ ದಾವಣಗೆರೆ ಜಿಲ್ಲಾ ಮುಖಂಡ ಆಲೂರು ನಿಂಗರಾಜ್ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂಬೇಡ್ಕರ್ ಭವನ ನಿರ್ಮಾಣಕ್ಕಾಗಿ ಈಗಾಗಲೇ 5 ಕೋಟಿ ರೂ.ಗಳನ್ನು ಜಿಲ್ಲಾಡಳಿತಕ್ಕೆ ಬಿಡುಗಡೆ ಮಾಡಲಾಗಿದೆ. ಆರು ವರ್ಷ ಕಳೆದರೂ ಭವನ ನಿರ್ಮಾಣ ಮಾಡುವಲ್ಲಿ ಜಿಲ್ಲಾಡಳಿತ ಮೀನಾಮೇಷ ಎಣಿಸುತ್ತಿದೆ ಎಂದು ದೂರಿದರು.
ಬರುವ ಏಪ್ರಿಲ್ 14 ರಂದು ಅಂಬೇಡ್ಕರ್ ಭವನ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲೇ ಬೇಕು ಎಂದು ಒತ್ತಾಯಿಸಿ ಏಪ್ರಿಲ್ 1 ರಂದು ಮಹಾನಗರ ಪಾಲಿಕೆ ಮುಂಭಾಗ `ಗುದ್ದಲಿ ಪೂಜೆ ಮಾಡಿ, ಇಲ್ಲವೇ ಕುರ್ಚಿ ಬಿಡಿ’ ಎಂಬ ಘೋಷಣೆಯಡಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುವುದು. ಅಂಬೇಡ್ಕರ್ ಭವನದ ಶಂಕುಸ್ಥಾಪನೆ ನೆರವೇರಿಸುವವರೆಗೂ ನಿರಂತರವಾಗಿ ಹೋರಾಟ ನಡೆಸಲಾಗುವುದು. ಪ್ರಾರಂಭದಲ್ಲಿ ಮಹಾನಗರ ಪಾಲಿಕೆ ಎದುರು ಹೋರಾಟ ನಡೆಸಲಾಗುವುದು. ಬೇಡಿಕೆ ಈಡೇರದಿದ್ದಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ಮಾಡಲಾಗುವುದು ಎಂದರು.
ಕಳೆದ ಹಲವು ವರ್ಷಗಳಿಂದ ದಾವಣಗೆರೆಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣವಾಗಬೇಕೆಂದು ಅನೇಕ ಮುಖಂಡರು ಹೋರಾಟ ನಡೆಸುತ್ತಾ ಬಂದಿದ್ದಾರೆ. 2009 ರಲ್ಲಿ ಯಡಿಯೂರಪ್ಪ ಅವರು ಹೈಸ್ಕೂಲ್ ಮೈದಾನದಲ್ಲಿ ನಡೆದ ಸಾಧನಾ ಸಮಾವೇಶದ ಸಂದರ್ಭದಲ್ಲಿ ಕಪ್ಪು ಬಟ್ಟೆ ಪ್ರದರ್ಶಿಸಿ ಗಮನ ಸೆಳೆದಾಗ ಸ್ಥಳದಲ್ಲೇ ಮೂರು ಕೋಟಿ ರೂ. ಹಣವನ್ನು ಮಂಜೂರು ಮಾಡಿದ್ದರು. ಆದರೆ ಇದುವರೆಗೂ ಭವನ ನಿರ್ಮಾಣಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಪತ್ರಿಕಾಗೋಷ್ಠಿಯಲ್ಲಿ ಶಾಮನೂರು ರಾಜು, ಅಂಜಿನಪ್ಪ ಶಾಮನೂರು, ಕರಿಯಪ್ಪ ಆವರಗೆರೆ, ಎಂ.ಹರೀಶ್ ಉಪಸ್ಥಿತರಿದ್ದರು.