ದಾವಣಗೆರೆ, ಮಾ.18- ಒತ್ತುವರಿಯಾಗಿರುವ ಗೋಮಾಳ ಜಮೀನು ಮತ್ತು ಕೆರೆ ಜಮೀನುಗಳನ್ನು ಹದ್ದುಬಸ್ತ್ ಮಾಡಲು ನಾಳೆ ದಿನಾಂಕ 19 ರಂದು ಭೂಮಾಪಕರನ್ನು ನಿಯೋಜಿಸಲಾಗಿದೆ.
ತಾಲ್ಲೂಕಿನ ಕಬ್ಬೂರು ಗ್ರಾಮದ ಗೋಮಾಳ ಸರ್ವೆ ನಂ.31 ಮತ್ತು 32, ಕೆರೆ ಸರ್ವೇ ನಂ.137ರ ಜಮೀನು ಒತ್ತುವರಿಯಾಗಿದ್ದು, ಕೂಡಲೇ ಒತ್ತುವರಿ ತೆರವುಗೊಳಿಸುವಂತೆ ಒತ್ತಾಯಿಸಿ, ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಈ ಹಿಂದೆ ಹಲವಾರು ಬಾರಿ ಸರ್ವೆ ಮಾಡಿದ್ದು, ಭೂಮಾಪಕರು ಸರಿಯಾಗಿ ಅಳತೆ ಮಾಡುತ್ತಿಲ್ಲ. ಹೀಗಾಗಿ ಅಪರ ಜಿಲ್ಲಾಧಿಕಾರಿ ಮತ್ತು ತಹಶೀಲ್ದಾರ್ ಸಮ್ಮುಖದಲ್ಲಿ ಅಳತೆ ಮಾಡಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದರು.
ಗ್ರಾಮಸ್ಥರ ಅಹವಾಲು ಆಲಿಸಿದ ಜಿಲ್ಲಾಧಿಕಾರಿಗಳು ವಸ್ತುನಿಷ್ಠವಾಗಿ ಅಳತೆ ಮಾಡುವಂತೆ ಭೂ ದಾಖಲೆಗಳ ಉಪನಿರ್ದೇಶಕರಿಗೆ ಸೂಚನೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಭೂ ದಾಖಲೆಗಳ ಉಪನಿರ್ದೇಶಕರು ನಾಳೆ ಬುಧವಾರ ಅಳತೆ ಮಾಡಲು ಕಬ್ಬೂರು ಗ್ರಾಮಕ್ಕೆ ಆಗಮಿಸುತ್ತಿರುವುದಾಗಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ರೈತ ಸಂಘ (ಹುಚ್ಚವ್ವನಹಳ್ಳಿ ಮಂಜುನಾಥ್ ಬಣ), ರೈತ ಸಂಘದ (ಡಿಎಸ್‍ಎಸ್ ಮಂಜುನಾಥ್ ಬಣ, ಕುಂದವಾಡ) ಹಾಗೂ ಕಬ್ಬೂರು ಗ್ರಾಮಸ್ಥರು ತಿಳಿಸಿದ್ದಾರೆ.