ದಾವಣಗೆರೆ, ಮಾ.18- ಸಿಂಧನೂರು ವಿಧಾನ ಸಭಾ ಕ್ಷೇತ್ರದ ಶಾಸಕ ಹಂಪನಗೌಡ ಬಾದರ್ಲಿ ಮುಖಂಡತ್ವದಲ್ಲಿ ಸರ್ಕಾರಕ್ಕೆ ಭದ್ರಾ ಅಣೆಕಟ್ಟಿಯಿಂದ 6 ಟಿಎಂಸಿ ನೀರು ಬಿಡಬೇಕೆಂದು ಒತ್ತಾಯಿಸಿರುವುದನ್ನು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್. ಲಿಂಗರಾಜ್, ಪ್ರಧಾನ ಕಾರ್ಯದರ್ಶಿ ಎ.ಎಂ. ಮಂಜುನಾಥ್ ವಿರೋಧಿಸಿದ್ದಾರೆ.
ಶಿವಮೊಗ್ಗ, ದಾವಣಗೆರೆ ಸೇರಿದಂತೆ ಈ ಭಾಗದ 2 ಲಕ್ಷ 65 ಸಾವಿರ ಎಕರೆ ಭೂ ಪ್ರದೇಶಕ್ಕೆ ನೀರುಣಿಸಲು ಭದ್ರಾ ನಿರ್ಮಾಣವಾಗಿದೆ. ಈಗಾಗಲೇ ನಮ್ಮ ಅಚ್ಚುಕಟ್ಟು ರೈತರಿಗೆ ನೀರಿನ ಕೊರತೆ ಇದೆ.
ಅಣೆಕಟ್ಟಿನಲ್ಲಿ ಬೇಸಿಗೆ ಹಂಗಾಮಿಗೆ ಇನ್ನು 53 ದಿನ ಸತತ ನೀರನ್ನು ಬಿಡಬೇಕು. ಕುಡಿಯುವ ನೀರು ಮತ್ತು ಕಾರ್ಖಾನೆಗಳಿಗೆ ಬಿಟ್ಟು ಮಳೆಗಾಲದ ತೋಟ, ಕಬ್ಬು, ನರ್ಸರಿ ಮಾಡಲಿಕ್ಕೆ ಮಾತ್ರ 10 ಟಿಎಂಸಿ ಇದೆ. ಇದರಲ್ಲೇ ಅವರಿಗೆ ನೀರು ಕೊಟ್ಟರೆ ನಮ್ಮ ಗತಿ ಏನು? ಎಂದು ಪ್ರಶ್ನಿಸಿದೆ.
ನಮ್ಮ ಭದ್ರಾ ಅಣೆಕಟ್ಟಿನ ಹೂಳು ತೆಗೆಸಲು ಸರ್ಕಾರಕ್ಕೆ ಒತ್ತಾಯಿಸುವ ಜತೆಗೆ ಭದ್ರಾ ಅಚ್ಚುಕಟ್ಟಿನ ಭಾಗದ ಪ್ರಜಾ ಪ್ರತಿನಿಧಿಗಳಾದ ಶಿವಮೊಗ್ಗ, ದಾವಣಗೆರೆ ಜಿಲ್ಲೆ ಹಾಗೂ ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಶಾಸಕರು ಮತ್ತು ಸಂಸದರು ರೈತರ ಹಿತಕಾಯಲು ಧ್ವನಿ ಎತ್ತಬೇಕೆಂದು ಒಕ್ಕೂಟದ ಉಪಾಧ್ಯಕ್ಷರುಗಳಾದ ನಾಗರಾಜರಾವ್ ಕೊಂಡಜ್ಜಿ, ಹನುಮಂತಪ್ಪ ಕುಂದುವಾಡ, ಮಹೇಶ್ ಕುಂದುವಾಡ ಒತ್ತಾಯಿಸಿದ್ದಾರೆ.