ದಾವಣಗೆರೆ, ಮಾ.16- ಹಣ ದೋಚುವ ಉದ್ದೇಶದಿಂದ ವ್ಯಕ್ತಿಯೋರ್ವನನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳಿಗೆ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು ಜೀವಾವಧಿ ಶಿಕ್ಷೆ ಹಾಗೂ ತಲಾ 30 ಸಾವಿರ ರೂ ದಂಡ ವಿಧಿಸಿದೆ.
ಹುಣಸಘಟ್ಟ ಗ್ರಾಮದ ವೆಂಕಟೇಶ (21) ಮತ್ತು ಹುಣಸಘಟ್ಟ ಗ್ರಾಮದ ಲಕ್ಷ್ಮಿಪತಿ (25) ಶಿಕ್ಷೆಗೆ ಒಳಗಾದ ಅಪರಾಧಿಗಳಾಗಿದ್ದಾರೆ. ಅಪ್ಸರ್ ಅಲಿ ಕೊಲೆಯಾದ ವ್ಯಕ್ತಿ ಆಗಿದ್ದಾನೆ. ಮೃತನ ಹೆಂಡತಿ ತನ್ನ ಗಂಡ ಕಾಣೆಯಾಗಿದ್ದಾನೆ ಎಂದು ಮಾ.23ರ 2016ರಂದು ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.
ಅಡಿಕೆ ವ್ಯಾಪಾರ ಮಾಡುತ್ತಿದ್ದ ಅಪ್ಸರ್ ಅಲಿ ಬಳಿ ಯಾವಾಗಲೂ ಹಣ ಇರುವುದನ್ನು ಮನಗಂಡ ಆರೋಪಿಗಳು ಆತನಿಗೆ ಪೋನ್ ಮಾಡಿ ಅಡಿಕೆ ಮಾರಾಟ ಮಾಡುವುದಾಗಿ ಹೇಳಿ, ಆತನನ್ನು ಕರೆಸಿಕೊಂಡು ಅಲ್ಲಿನ ಏಳುಮನೆ ಹಾಲಸ್ವಾಮಿ ಅವರ ತೋಟದ ಬಳಿ ಕೊಲೆಗೈದು, ಅವನ ಬಳಿ ಇದ್ದ ಹಣ ತೆಗೆದುಕೊಂಡು. ಗುಂಡಿ ತೆಗೆದು ಹೆಣ ಮುಚ್ಚಿ ಹಾಕಿರುತ್ತಾರೆ.
ಪ್ರಕರಣ ಕುರಿತು ತನಿಖೆ ನಡೆಸಿದ ಪೊಲೀಸ್ ವೃತ್ತ ನಿರೀಕ್ಷಕ ಜೆ. ರಮೇಶ್ ಆರೋಪಿಗಳ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಆಪಾಧಿತರ ಮೇಲಿನ ಆರೋಪ ಸಾಬೀತಾಗಿದ್ದು ನ್ಯಾಯಾಧೀಶರಾದ ಎಂ.ಹೆಚ್ ಅಣ್ಣಯ್ಯನವರ್ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ. ಪಿರ್ಯಾದಿ ಪರ ಸರ್ಕಾರಿ ವಕೀಲ ಕೆ.ಎಸ್. ಸತೀಶ್ ನ್ಯಾಯ ಮಂಡಿಸಿದ್ದಾರೆ.