ದಾವಣಗೆರೆ, ಮಾ. 14- ವೃತ್ತಿ ರಂಗಭೂಮಿ ರಂಗಾಯಣ ದಾವಣಗೆರೆ ಇವರ ವತಿಯಿಂದ ನಾಳೆ ದಿನಾಂಕ 15, 16 ಮತ್ತು 17 ರಂದು ಮೂರು ದಿನಗಳ ಕಾಲ ನಗರದ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದಲ್ಲಿ ವಿಚಾರ ಸಂಕಿರಣ, ರಂಗ ಸಂವಾದ, ರಂಗ ಗೌರವ, ರಂಗ ಗೀತೆಗಳ ಗಾಯನ, ನಾಟಕಗಳ ಪ್ರದರ್ಶನ, ರಂಗ ದಾಖಲೆಗಳ ಪ್ರದರ್ಶನ, ಚಿತ್ರಕಲಾ ಪ್ರದರ್ಶನ ಕುರಿತ ರಾಷ್ಟ್ರೀಯ ವೃತ್ತಿ ರಂಗೋತ್ಸವ-2025 ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ವೃತ್ತಿ ರಂಗಭೂಮಿ ರಂಗಾಯಣ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ದಿನಾಂಕ 15 ರ ಶನಿವಾರ ಬೆಳಿಗ್ಗೆ 11.30 ಕ್ಕೆ ಚಿತ್ರಕಲೆ ಮತ್ತು ರಂಗ ದಾಖಲೆಗಳ ಪ್ರದರ್ಶನವನ್ನು ದಾವಣಗೆರೆ ವಿವಿ ಕುಲಪತಿ ಪ್ರೊ.ಬಿ.ಡಿ.ಕುಂಬಾರ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ದೃಶ್ಯಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಜೈರಾಜ ಎಂ. ಚಿಕ್ಕಪಾಟೀಲ್, ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಸದಸ್ಯ ವೈ.ಕುಮಾರ್ ಮತ್ತಿತರರು ಭಾಗವಹಿಸಲಿದ್ದಾರೆ. ರಂಗ ದಾಖಲೆ ಸಂಗ್ರಹಕಾರ ಎ.ಎಸ್.ಕೃಷ್ಣಮೂರ್ತಿ ಅಜ್ಜಂಪುರ ಸನ್ಮಾನಿಸುವರು.
ಸಂಜೆ 6.30 ಕ್ಕೆ ವೃತ್ತಿ ರಂಗೋತ್ಸವ ದೃಶ್ಯಕಲಾ ಮಹಾವಿದ್ಯಾಲಯದ ಬಯಲು ರಂಗಮಂದಿರದ ಕೋಲ ಶಾಂತಪ್ಪ ರಂಗಮಂಟಪದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಕಾರ್ಯಕ್ರಮವನ್ನು ಉದ್ಘಾಟಿಸುವರು.
ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ರಂಗ ನಾಟಕಗಳನ್ನು ಉದ್ಘಾಟಿಸುವರು. ವೃತ್ತಿ ರಂಗಭೂಮಿ ರಂಗಾಯಣದ ನಿರ್ದೇಶಕ ಮಲ್ಲಿಕಾರ್ಜುನ ಕಡಕೋಳ ಅಧ್ಯಕ್ಷತೆ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ರಂಗ ಸಮಾಜದ ಸದಸ್ಯ ಜಹಾಂಗೀರ್, ಮಹಾಂತೇಶ್ ಗಜೇಂದ್ರಗಡ, ಗುಬ್ಬಿ ಚನ್ನಬಸಯ್ಯ, ಗುಬ್ಬಿ ವೀರಣ್ಣ ಪ್ರಶಸ್ತಿ ಪುರಸ್ಕೃತ ಡಾ. ಕೆ.ನಾಗರತ್ನಮ್ಮ ಮರಿಯಮ್ಮನಹಳ್ಳಿ ಮತ್ತಿತರರು ಭಾಗವಹಿಸಲಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ವೃತ್ತಿ ರಂಗಭೂಮಿ ರಂಗಾಯಣ ವಿಶೇಷಾಧಿಕಾರಿ ರವಿಚಂದ್ರ, ಎಸ್.ಎಸ್.ಸಿದ್ಧರಾಜ್, ನೀಲಗುಂದ ಬಸವನಗೌಡ, ಡಾ.ಶೃತಿ ರಾಜ್, ಎನ್.ಟಿ.ಮಂಜುನಾಥ್, ಶಂಭುಲಿಂಗಪ್ಪ ಕೊಟ್ಟೂರು ಉಪಸ್ಥಿತರಿದ್ದರು.