ಚರಂಡಿಯಲ್ಲಿ ಹೆಣ್ಣು ಶಿಶು ಭ್ರೂಣ ಪತ್ತೆ : ದೂರು ದಾಖಲು

ಹರಿಹರ, ಮಾ.10- ನಗರದ ಹೈಸ್ಕೂಲ್ ಬಡಾವಣೆಯ 3ನೇ ಮೇನ್, 2ನೇ ಕ್ರಾಸ್‍ನಲ್ಲಿರುವ ಬೊಂಗಾಳೆ ನರ್ಸಿಂಗ್ ಹೋಂ ಬಳಿಯ ಗೋಡೆಗೆ ಹೊಂದಿ ಕೂಂಡಿರುವ ಚರಂಡಿಯಲ್ಲಿ ಭಾನುವಾರ ಹೆಣ್ಣು ಶಿಶುವಿನ ಭ್ರೂಣ ಪತ್ತೆಯಾಗಿದೆ. 

ಸ್ಥಳೀಯರು ಗಮನಕ್ಕೆ ಬರುತ್ತಿದ್ದಂತೆ ಶಿಶು ಅಭಿವೃದ್ಧಿ, ಆರೋಗ್ಯ ಇಲಾಖೆ ಮತ್ತು ಪೊಲೀಸರಿಗೆ ತಿಳಿಸಿದ್ದು, ಸ್ಥಳಕ್ಕೆ ಧಾವಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದರು. ಬೆಂಕಿ ನಗರದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಕಾವ್ಯ ಅಂದಾಜು 20 ರಿಂದ 22 ವಾರಗಳ ಹೆಣ್ಣು ಭ್ರೂಣವಾಗಿದೆ ಎಂದು ಅಭಿಪ್ರಾಯಪಟ್ಟರು.  

ಸಮಾಜ ಸೇವಕ ಸೈಯದ್ ಸನಾವುಲ್ಲಾ ಮತ್ತಿತರರು ಚರಂಡಿಯಲ್ಲಿದ ಭ್ರೂಣವನ್ನು ಹೂರತೆಗೆದರು. ನಂತರ ವೈದ್ಯಕೀಯ ಪರೀಕ್ಷೆಗೆ ನಗರದ ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಯಿತು. ಭ್ರೂಣವನ್ನು ಯಾರು ಚರಂಡಿಗೆ ಎಸೆದಿದ್ದಾರೆ ಎಂಬ ಬಗ್ಗೆ ಮಾಹಿತಿ ತಿಳಿದು ಬಂದಿಲ್ಲ. ಹೆಣ್ಣು ಮಗು ಎಂಬ ಕಾರಣಕ್ಕೆ ಗರ್ಭಪಾತ ಮಾಡಿಸಿರುವ ಸಾಧ್ಯತೆಯಿದೆ. 

ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ರಶೀದಾ ಬಾನು ನೀಡಿದ ದೂರನ್ನು ಆಧರಿಸಿ ಪೊಲೀಸರು ಅಪರಿಚತ ವ್ಯಕ್ತಿಗಳ ವಿರುದ್ದ ಎಫ್‍ಐಆರ್ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಸ್ಥಳಕ್ಕೆ ನಗರಠಾಣೆ ಸಿಪಿಐ ಎಸ್.ದೇವಾನಂದ್, ಪಿಎಸ್‍ಐ ಶ್ರೀಪತಿ ಗಿನ್ನಿ, ತಾಲೂಕು ಆರೋಗ್ಯಾಧಿಕಾರಿ ಅಬ್ದುಲ್ ಖಾದರ್ ಇತರರಿದ್ದರು.

error: Content is protected !!