ದಾವಣಗೆರೆ, ಮಾ. 4- ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ವತಿಯಿಂದ ಇದೇ ದಿನಾಂಕ 6 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ನಗರದ ಕುವೆಂಪು ಕನ್ನಡ ಭವನದಲ್ಲಿ `ಶರಣ ಸಿರಿ’ ಪ್ರಶಸ್ತಿ ಪ್ರದಾನ, ದಾವಣಗೆರೆ ಜಿಲ್ಲಾ ಯುವ ವೇದಿಕೆಯ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಏರ್ಪಡಿಸಲಾಗಿದೆ ಎಂದು ಪರಿಷತ್ ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಾಣೇಹಳ್ಳಿ ಡಾ. ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿ, ಪ್ರಶಸ್ತಿ ಪ್ರದಾನ ಮಾಡಲಿದ್ದು, ಶರಣ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷ ಡಾ. ಸಿ.ಸೋಮಶೇಖರ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.
ಇದೇ ವೇಳೆ `ಬಸವಣ್ಣನವರ ಬಹುಮುಖ ವ್ಯಕ್ತಿತ್ವ’ ಕುರಿತು ಶಿವಮೊಗ್ಗ ಶಂಕರಘಟ್ಟದ ಸಂಸ್ಕೃತಿ ಚಿಂತಕ ಡಾ. ಬಸವರಾಜ ನೆಲ್ಲಿಸರ ಉಪನ್ಯಾಸ ನೀಡಲಿದ್ದಾರೆ. ಪರಿಷತ್ ಗೌರವ ಸಲಹೆಗಾರ ಹೆಚ್.ಕೆ.ಲಿಂಗರಾಜ್ ದತ್ತಿ ದಾಸೋಹಿಗಳ ಪರಿಚಯ ಮಾಡಿಕೊಡಲಿದ್ದಾರೆ.
ರಾಜ್ಯ ಯುವ ವೇದಿಕೆ ಸಂಚಾಲಕ ಪ್ರಕಾಶ್ ಎಸ್. ಅಂಗಡಿ ಸೇವಾ ದೀಕ್ಷಾ ಬೋಧನೆ ಮಾಡಲಿದ್ದು, ಡಾ. ಶಿವರಾಜ್ ಕಬ್ಬೂರು ಮತ್ತು ತಂಡದವರು ಸೇವಾ ದೀಕ್ಷೆ ಸ್ವೀಕಾರ ಮಾಡಲಿದ್ದಾರೆ. ಕದಳಿ ಮಹಿಳಾ ವೇದಿಕೆ ಪ್ರಮೀಳಾ ನಟರಾಜ್, ಗಾಯತ್ರಿ ವಸ್ತ್ರದ್ ಮತ್ತಿತರರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆ ಭೀಮಸಮುದ್ರದ ಲಿಂ. ಶ್ರೀಮತಿ ಹಾಲಮ್ಮ ಮತ್ತು ಲಿಂ. ಮಲ್ಲಿಕಾರ್ಜುನಪ್ಪ ಅವರ ಸ್ಮರಣಾರ್ಥ ಜಿಲ್ಲಾ ಶರಣ ಸಾಹಿತ್ಯ ಪರಿಷತ್ ವತಿಯಿಂದ `ಶರಣ ಸಿರಿ’ ಪ್ರಶಸ್ತಿ ನೀಡಲಾಗುತ್ತಿದ್ದು, ಚನ್ನಗಿರಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಹೆಚ್.ಎಸ್. ಮಲ್ಲಿಕಾ ರ್ಜುನಪ್ಪ ಅವರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪರಿಷತ್ ಪದಾಧಿಕಾರಿಗಳಾದ ಬಿ.ಟಿ.ಪ್ರಕಾಶ್, ಭರಮಪ್ಪ ಮೈಸೂರು, ಆರ್. ಸಿದ್ದೇಶಪ್ಪ, ಜಿ.ಎಂ.ಕುಮಾರಪ್ಪ ಉಪಸ್ಥಿತರಿದ್ದರು.