ಪರೀಕ್ಷಾ ಪಾವಿತ್ರ್ಯತೆಗೆ ಸೂಚನೆ

ಎಸ್ಸೆಸ್ಸೆಲ್ಸಿ ಪರೀಕ್ಷೆ ಪೂರ್ವಭಾವಿ ಸಭೆಯಲ್ಲಿ ಡಿಸಿ

ಜೀವನದಲ್ಲಿ ಎಲ್ಲರಿಗೂ ಶಿಕ್ಷಣ ಮುಖ್ಯ. ಪೋಷಕರು ಮಕ್ಕಳನ್ನು ಶಾಲೆಯಿಂದ ಬಿಡಿಸುವ ಆಲೋಚನೆಯನ್ನು ತೆಗೆದು ಹಾಕಬೇಕು. ಮಕ್ಕಳಿಗೆ ಸದಾ ಪ್ರೋತ್ಸಾಹಿಸುತ್ತಾ ಅವರ ಸಾಧನೆಗೆ ಬೆನ್ನು ತಟ್ಟಬೇಕು. 

– ಗಂಗಾಧರ ಸ್ವಾಮಿ, ಜಿಲ್ಲಾಧಿಕಾರಿ

ದಾವಣಗೆರೆ, ಮಾ.3- ಪರೀಕ್ಷೆ ನಡೆಸುವುದು ಒಂದು ಪವಿತ್ರ ಕೆಲಸವಾಗಿದ್ದು, ಯಾವುದೇ ರೀತಿಯ ಅಕ್ರಮಕ್ಕೆ ಎಡೆ ಮಾಡದಂತೆ ಶಾಂತಿಯುತವಾಗಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯನ್ನು ಯಶಸ್ವಿಗೊಳಿಸಬೇಕೆಂದು ಜಿಲ್ಲಾಧಿಕಾರಿ ಗಂಗಾಧರಸ್ವಾಮಿ ಹೇಳಿದರು.

 ಗುರುವಾರ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಜಿಲ್ಲಾಡಳಿತ, ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ಎಸ್.ಎಸ್.ಎಲ್.ಸಿ ಪರೀಕ್ಷೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪರೀಕ್ಷಾ ಕೊಠಡಿಯಲ್ಲಿ ಯಾವುದೇ ಅವಘಡವಾಗದಂತೆ ನೋಡಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಇನ್ನೂ 28 ದಿನ ಬಾಕಿ ಇದೆ. ಮಾರ್ಚ್ 21 ರಿಂದ ಏಪ್ರಿಲ್ 4ರವರೆಗೆ ಪರೀಕ್ಷೆಗಳು ನಡೆಯಲಿವೆ. ಈ ಬಾರಿ ಕಟ್ಟುನಿಟ್ಟಾಗಿ ಪರೀಕ್ಷೆ ನಡೆಯಲಿದ್ದು, ಕಾಪಿ ಮಾಡಲು ಯಾವುದೇ ರೀತಿಯ ಅವಕಾಶ ಇರುವುದಿಲ್ಲ. ವಿದ್ಯಾರ್ಥಿಗಳು  ಪರಿಶ್ರಮದಿಂದ ಪರೀಕ್ಷೆಯನ್ನು ಎದುರಿಸಲು ಸಿದ್ದರಾಗಬೇಕು. ಅಂಕಗಳ ಬೆನ್ನತ್ತುವುದರೊಂದಿಗೆ ಕ್ರಿಯಾಶೀಲತೆ ಕಳೆದುಕೊಳ್ಳುವುದು ಬೇಡ, ಪರ್ಯಾಯ ಮಾರ್ಗದಲ್ಲಿ ಪರೀಕ್ಷೆ ಪಾಸು ಮಾಡಲು ಹೋದರೆ ಜೀವನದಲ್ಲಿ ಫೇಲ್ ಆಗುತ್ತೀರಿ, ಆತ್ಮಸ್ಥೈರ್ಯದಿಂದ ಮಕ್ಕಳು ಪರೀಕ್ಷೆ ಬರೆಯುವಂತೆ ಜಿಲ್ಲಾಧಿಕಾರಿ ಕಿವಿಮಾತು ಹೇಳಿದರು. 

ಪರೀಕ್ಷಾ ಸಿಬ್ಬಂದಿಗಳು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಅಂಕಗಳಿಗಿಂತ ಗುಣಮಟ್ಟದ ಫಲಿತಾಂಶಕ್ಕೆ ಶ್ರಮಿಸಬೇಕು. ಹಿಜಾಬ್ ಸಂಬಂಧ ಸರ್ಕಾರದ ಸುತ್ತೋಲೆಯನ್ನು ಅನುಸರಿಸಬೇಕು. ಪ್ರತಿ ಶಾಲೆಯಲ್ಲೂ ಸಿಸಿ ಕ್ಯಾಮರಾ ಅಳವಡಿಸಬೇಕು. ಸಿಬ್ಬಂದಿಗಳು ಕೂಡ ಪರೀಕ್ಷಾ ಕೊಠಡಿಗಳಿಗೆ ಮೊಬೈಲ್ ತೆಗೆದುಕೊಂಡು ಹೋಗುವಂತಿಲ್ಲ. ಕೊಠಡಿಗಳಲ್ಲಿ ಗಡಿಯಾರಗಳನ್ನು ಕಡ್ಡಾಯವಾಗಿ ಅಳವಡಿಸಿಕೊಳ್ಳಬೇಕು. ಒಳಗಡೆ ಕಾಣುವಂತಹ ನೀರಿನ ಬಾಟಲ್‌ಗಳನ್ನು ತೆಗೆದು ಕೊಂಡು ಬರಲು ಮಾತ್ರ ಅವಕಾಶ ಕೊಡಬೇಕು. ಕೊಠಡಿಯಲ್ಲಿ ನೀರು, ಬೆಳಕಿನ ಸೌಲಭ್ಯಗಳು ಇರುವಂತೆ ನೋಡಿಕೊಳ್ಳಬೇಕು ಎಂದರು.

22579 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಲಿದ್ದಾರೆ. ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳಲ್ಲಿ ಕಲಂ 144 ರನ್ವಯ ನಿಷೇಧಾಜ್ಞೆ ಜಾರಿ ಮಾಡಲಾಗುವುದು. ಪರೀಕ್ಷಾ ದಿನಗಳಂದು ಪರೀಕ್ಷಾ ಕೇಂದ್ರದ ಸುತ್ತಲಿನ 200 ಮೀಟರ್ ಅಂತರದಲ್ಲಿರುವ ಜೆರಾಕ್ಸ್ ಅಂಗಡಿಗಳನ್ನು ತೆರೆಯುವಂತಿಲ್ಲ. ಜಿಲ್ಲಾ ಹಂತದಲ್ಲಿ ಜಾಗೃತ ದಳದ ಅಧಿಕಾರಿಗಳನ್ನು ನೇಮಕ ಮಾಡಿ, ಪರೀಕ್ಷಾ ಕೇಂದ್ರಗಳ ಸುತ್ತಲೂ ಪೊಲೀಸರನ್ನು ನೇಮಕಗೊಳಿ ಸಲಾಗುತ್ತದೆ ಎಂದು ಅವರು ಹೇಳಿದರು.

ಡಿ.ಡಿಪಿ.ಐ ಕೊಟ್ರೇಶ್ ಮಾತನಾಡಿ, ಜಿಲ್ಲೆಯಲ್ಲಿ ಪ್ರಸಕ್ತ ಸಾಲಿನಲ್ಲಿ ಒಟ್ಟು 22579 ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆಯಲಿದ್ದು, ಒಟ್ಟು 81 ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯಲ್ಲಿ ಉತ್ತಮವಾಗಿ ಪರೀಕ್ಷೆ ನಡೆಯಲು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಂತೆ ಎಲ್ಲಾ ಮುಂಜಾಗೃತ ಕ್ರಮ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು. 

ಜಿ.ಪಂ ಉಪಕಾರ್ಯದರ್ಶಿ ಕೃಷ್ಣನಾಯ್ಕ, ಡಯಟ್ ಪ್ರಾಂಶುಪಾಲರಾದ ಗೀತಾ, ಡಿಡಿಪಿಯು ಕರಿಬಸಪ್ಪ ಸೇರಿದಂತೆ ಅಧಿಕಾರಿಗಳು ಸಭೆಯಲ್ಲಿ  ಉಪಸ್ಥಿತರಿದ್ದರು.

error: Content is protected !!