ದಾವಣಗೆರೆ, ಫೆ. 27- ಜಿಲ್ಲಾ ಅಮೆಚೂರು ಕಬಡ್ಡಿ ಸಂಸ್ಥೆ, ಸೃಷ್ಠಿ ಕಬಡ್ಡಿ ಅಕಾಡೆಮಿ ಹಾಗೂ ಜನಪ್ರಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಸ್ಥೆ ಸಂಯುಕ್ತಾಶ್ರಯದಲ್ಲಿ ನಾಳೆ ದಿನಾಂಕ 28 ರಿಂದ ಮಾರ್ಚ್ 2 ರವರೆಗೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಹೊನಲು ಬೆಳಕಿನ ಕಬಡ್ಡಿ ಪ್ರೀಮಿಯರ್ ಲೀಗ್ ಪಂದ್ಯಾವಳಿ ನಡೆಯಲಿದೆ ಎಂದು ಜನಪ್ರಿಯ ಕ್ರೀಡಾ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾಳೆ 28 ರಂದು ಸಂಜೆ 6 ಗಂಟೆಗೆ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪಂದ್ಯಾವಳಿ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್, ದೂಡಾ ಅಧ್ಯಕ್ಷ ದಿನೇಶ್ ಕೆ. ಶೆಟ್ಟಿ, ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ, ಎಸ್ಪಿ ಉಮಾ ಪ್ರಶಾಂತ್, ಜಿ.ಪಂ.ಸಿಇಓ ಸುರೇಶ್ ಬಿ. ಇಟ್ನಾಳ್, ಶ್ರೀನಿವಾಸ ಶಿವಗಂಗಾ, ಎಂ. ದೊಡ್ಡಪ್ಪ, ಕುರುಡಿ ಗಿರೀಶ, ಎಂ. ನಾಗರಾಜ್, ಕಬಡ್ಡಿ ಮಲ್ಲು, ಹೆಚ್. ಚಂದ್ರಪ್ಪ ಭಾಗವಹಿಸಲಿದ್ದಾರೆ.
ಪ್ರತಿ ದಿನವೂ ಸಂಜೆ 6 ರಿಂದ ಹೊನಲು ಬೆಳಕಿನ ಕಬಡ್ಡಿ ಪಂದ್ಯಗಳನ್ನು ಪ್ರಾರಂಭಿಸಲಾಗುವುದು. ಲೀಗ್ ಮಾದರಿಯಲ್ಲಿ ಪ್ರತಿ ದಿನ 10 ಪಂದ್ಯಗಳನ್ನು ನಡೆಸಲಾಗುವುದು. ಒಟ್ಟು 24 ಲೀಗ್ ಪಂದ್ಯಗಳನ್ನು ಹಾಗೂ ಲೀಗ್ ನಲ್ಲಿ ಟಾಪ್ 4 ಮಾದರಿಯಲ್ಲಿ ಆಡಿಸಲಾಗುವುದು ಎಂದರು.
ಅಂದು ಮಧ್ಯಾಹ್ನ 2 ಗಂಟೆಯಿಂದ ಜಯದೇವ ವೃತ್ತದಿಂದ ಜಿಲ್ಲಾ ಕ್ರೀಡಾಂಗಣದವರೆಗೆ ಕಬಡ್ಡಿ ಪಟುಗಳು, ಕ್ರೀಡಾ ಪ್ರೋತ್ಸಾಹಕರು, ಅಭಿಮಾನಿಗಳಿಂದ ಮೆರವಣಿಗೆ ನಡೆಯಲಿದೆ ಎಂದು ಹೇಳಿದರು.
ವಿಜೇತ ತಂಡಗಳಿಗೆ ಪ್ರಥಮ ಎರಡು ಲಕ್ಷ, ದ್ವಿತೀಯ ಒಂದು ಲಕ್ಷ, ತೃತೀಯ ಮತ್ತು ಚತುರ್ಥ ಬಹುಮಾನ ತಲಾ 25 ಸಾವಿರ ರೂ. ಗಳನ್ನು ನೀಡಲಾಗುವುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ದೊಡ್ಡಪ್ಪ, ಎಂ. ನಾಗರಾಜ್, ಕಬಡ್ಡಿ ಮಲ್ಲು, ಹೆಚ್.ಚಂದ್ರಪ್ಪ, ಪ್ರಭು, ರಾಕೇಶ್ ಮತ್ತಿತರರು ಉಪಸ್ಥಿತರಿದ್ದರು.