ದಾವಣಗೆರೆ, ಫೆ. 19- ಲೋಡ್ ಶೆಡ್ಡಿಂಗ್ ನೆಪದಲ್ಲಿ ಸಮರ್ಪಕ ವಿದ್ಯುತ್ ಸರಬರಾಜು ಮಾಡದಿರುವುದನ್ನು ವಿರೋಧಿಸಿ ನಾಳೆ ದಿನಾಂಕ 20 ರ ಗುರುವಾರ ತಾಲ್ಲೂಕಿನ ಆನಗೋಡು ಬೆಸ್ಕಾಂ ಕಚೇರಿ ಮುಂದೆ ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘದ ತಾಲ್ಲೂಕು ಅಧ್ಯಕ್ಷ ಮಂಡ್ಲೂರು ವಿಶ್ವನಾಥ್ ಸುದ್ದಿಗೋಷ್ಥಿಯಲ್ಲಿ ತಿಳಿಸಿದರು.
ಆನಗೋಡು ಬೆಸ್ಕಾಂ ವ್ಯಾಪ್ತಿಯಲ್ಲಿ ಗ್ರಾಮಗಳ ಕೃಷಿ ಪಂಪ್ ಸೆಟ್‌ಗಳಿಗೆ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುತ್ತಿಲ್ಲ. ಅಧಿಕಾರಿಗಳನ್ನು ಕೇಳಿದರೆ ಲೋಡ್ ಶೆಡ್ಡಿಂಗ್ ನೆಪ ಹೇಳಲಾಗುತ್ತದೆ ಎಂದು ದೂರಿದರು
ಕಳಪೆ ಗುಣಮಟ್ಟದ ವಿದ್ಯುತ್ ಪೂರೈಕೆ ಕಾರಣದಿಂದ ಪ್ರತಿ ದಿನ ಐದಾರು ಬಾರಿ ಲೋಡ್‌ಶೆಡ್ಡಿಂಗ್ ನಿಂದ ಪಂಪ್‌ಸೆಟ್ ಸುಟ್ಟು ಹೋಗುತ್ತಿವೆ. ಈ ಬಗ್ಗೆ ಅನೇಕ ಬಾರಿ ಗಮನಕ್ಕೆ ತಂದರೂ ಉದಾಸೀನತೆ ಮಾಡಲಾಗುತ್ತಿದೆ ಎಂದು ಹೇಳಿದರು.
ಹೊಸಹಳ್ಳಿ ಸ್ಟೇಷನ್ ಪ್ರಾರಂಭಿಸಿದರೆ ಸಮಸ್ಯೆ ಬಗೆಹರಿಯುತ್ತದೆ. ಆದರೆ ಅನೇಕ ಬಾರಿ ಮುಂದೂಡಲಾಗುತ್ತಿದೆ. ಎಲ್ಲವನ್ನೂ ವಿರೋಧಿಸಿ ಗುರುವಾರ ಬೆಳಿಗ್ಗೆ 11 ಕ್ಕೆ ಧರಣಿ ಸತ್ಯಾಗ್ರಹ ನಡೆಸಲಾಗುವುದು ಎಂದು ಹೇಳಿದರು.
ಸಂಘದ ಅಧ್ಯಕ್ಷ ಎಸ್.ಜಿ. ರಮೇಶ್, ಎನ್.ವಿ. ನಾಗರಾಜಪ್ಪ, ಶಿವಕುಮಾರ್, ಸಿದ್ಧಪ್ಪ, ಎಂ. ನವೀನ, ಸಿದ್ಧಲಿಂಗಪ್ಪ ಉಪಸ್ಥಿತರಿದ್ದರು.