ಸಂಚಾರ ನಿಯಮ ಉಲ್ಲಂಘನೆ : 4.5 ಲಕ್ಷ ರೂ.ಗಳ ದಂಡ ವಸೂಲಿ

2025ರ ಜ.1ರಿಂದ ಫೆ.17ರ ವರೆಗೆ ಕ್ಯಾಮೆರಾಗಳಲ್ಲಿ ಸೆರೆಯಾದ ಒಟ್ಟು 1,433 ಸಂಚಾರ  ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಒಟ್ಟು 8,28,000 ರೂ.ಗಳ ದಂಡ ಕಟ್ಟಿಸಲಾಗಿದೆ.

ದಾವಣಗೆರೆ, ಫೆ.18- ಸಂಚಾರ ನಿಯಮ ಉಲ್ಲಂಘಿಸಿದ ಒಟ್ಟು 750 ಪ್ರಕರಣಗಳಿಗೆ ಸಂಬಂಧಿಸಿದಂತೆ ದಕ್ಷಿಣ ಹಾಗೂ ಉತ್ತರ ಸಂಚಾರ ಪೊಲೀಸ್ ಠಾಣೆಯ ಅಧಿಕಾರಿಗಳು ಬಾಕಿ ಉಳಿಸಿಕೊಂಡಿದ್ದ 4.5 ಲಕ್ಷ ರೂ.ಗಳ ದಂಡವನ್ನು ಕಟ್ಟಿಸಿರುತ್ತಾರೆ.

ನಗರದ ಪ್ರಮುಖ ರಸ್ತೆಗಳಲ್ಲಿ ಸಂಚಾರಿ ನಿಯಮ ಉಲ್ಲಂಘಿಸಿದ ದೃಶ್ಯ ಸಿ.ಸಿ ಕ್ಯಾಮೆರಾಗಳಲ್ಲಿ ಸೆರೆ ಆಗಿ ಇ-ಚಲನ್‌ ಹೊರಡಿಸಿದ್ದರೂ ದಂಡ ಪಾವತಿಸದೇ ಇರುವ ಪ್ರಕರಣಗಳ ಪೈಕಿ 10 ಮತ್ತು 10ಕ್ಕಿಂತ ಹೆಚ್ಚು ಚಲನ್‌ ಉಳಿಸಿಕೊಂಡ 50 ವಾಹನ ಮಾಲೀಕ ಮತ್ತು ಚಾಲಕರನ್ನು ಪತ್ತೆ ಹಚ್ಚಿ ಬಾಕಿ ಇರುವ ದಂಡ ವಸೂಲಿ ಮಾಡಿದ್ದಾರೆ.

ದಕ್ಷಿಣ ಸಂಚಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದೇ ಬೈಕ್ ಮೇಲಿರುವ 38 ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳ ಪೈಕಿ ಒಟ್ಟು 19 ಸಾವಿರ ರೂ.ಗಳ ದಂಡ ಹಾಗೂ ಆಟೋ ವಾಹನದ ಮೇಲಿರುವ 31 ಪ್ರಕರಣಗಳ ಪೈಕಿ 17,500 ರೂ.ದಂಡ ವಸೂಲಿ ಮಾಡಲಾಗಿದೆ.

ಉತ್ತರ ಸಂಚಾರ ಪೊಲೀಸ್ ಠಾಣೆಯಲ್ಲಿ ಒಂದೇ ಬೈಕ್ ಮೇಲಿರುವ 31 ಪ್ರಕರಣಗಳ ಪೈಕಿ ಒಟ್ಟು 16,500 ರೂ.ಗಳ ದಂಡ ಕಟ್ಟಿಸಲಾಗಿರುತ್ತದೆ.

ಈ ವಿಶೇಷ ಕಾರ್ಯಾಚರಣೆಯು ಹೀಗೆ ಮುಂದುವರೆಯಲಿದ್ದು, ಸಂಚಾರ ನಿಯಮ ಉಲ್ಲಂಘಿಸಿ ಇ-ಚಲನ್‌ ಬಾಕಿ ಉಳಿಸಿಕೊಂಡ ವಾಹನ ಚಾಲಕರು ದಕ್ಷಿಣ ಸಂಚಾರ ಠಾಣೆ ಮತ್ತು ಹೆಡ್ ಪೋಸ್ಟ್ ಆಫೀಸ್‌ನಲ್ಲಿ ಬಂದು ದಂಡ ಪಾವತಿಸಬಹುದಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀಮತಿ ಉಮಾ ಪ್ರಶಾಂತ್ ಪ್ರಕಟಣೆಯಲ್ಲಿ   ತಿಳಿಸಿದ್ದಾರೆ.

error: Content is protected !!