ಭದ್ರಾ ಮೇಲ್ದಂಡೆಗೆ ಭದ್ರಾ ನೀರು : ರೈತ ಮುಖಂಡರ ವಿರೋಧ

ದಾವಣಗೆರೆ, ಜ. 15- ಜಿಲ್ಲೆಯ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗ ಬೇಕಾದರೆ ತುಂಗಾ ನದಿಯಿಂದ ಲಿಫ್ಟ್ ಮಾಡಿದಾಗ ಮಾತ್ರ ಭದ್ರಾ ಮೇಲ್ದಂಡೆಗೆ  ನೀರು ಹರಿಸಬೇಕು. ಮಧ್ಯದಲ್ಲಿ ನೀರು ಹರಿಸುವುದನ್ನು ಸ್ಥಗಿತಗೊಳಿಸಬೇಕು ಎಂದು ಭಾರತೀಯ ರೈತ ಒಕ್ಕೂಟದ ಅಧ್ಯಕ್ಷ ಶಾಮನೂರು ಹೆಚ್.ಆರ್.ಲಿಂಗರಾಜ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರೈತರಿಗೆ ಅನುಕೂಲವಾಗುವ ಹಿತದೃಷ್ಟಿಯಿಂದ ಅಣೆಕಟ್ಟು ಕಟ್ಟಿ ಏಳು ದಶಕಗಳು ಕಳೆದಿವೆ. ಅಣೆಕಟ್ಟು ಕಟ್ಟುವಾಗ ದಾವಣಗೆರೆ, ಶಿವಮೊಗ್ಗ, ಭದ್ರಾವತಿ, ಹರಪನಹಳ್ಳಿ, ಹರಿಹರ ಹಾಗೂ ಚಿಕ್ಕಮಗಳೂರು ಭಾಗದಲ್ಲಿ ರೈತರು ಬೆಳೆಯುವ ಬೆಳೆಗೆ ನೀರಿನ ಅನುಕೂಲ ಮಾಡಿಕೊಡುವ ದೃಷ್ಟಿಯಲ್ಲಿ ಅಂದು ರಾಷ್ಟ್ರೀಯ ಬ್ಯಾಂಕ್‌ನಲ್ಲಿ ಸಾಲ ಮಾಡಿ ಕೃಷಿ ಚಟುವಟಿಕೆಗಳ ಅನುಕೂಲಕ್ಕಾಗಿ ಅಣೆಕಟ್ಟು ಕಟ್ಟಿದ್ದಾರೆ. ಆದರೆ ಇಂದು ನಮ್ಮ ರೈತರಿಗೆ ಅಗತ್ಯವಿರುವ ನೀರನ್ನು ಎಲ್ಲೆಡೆ ಹರಿಸಲಾಗುತ್ತಿದೆ. ದಾವಣಗೆರೆ ಕರ್ನಾಟಕದ ಮಧ್ಯೆ ಭಾಗದಲ್ಲಿದೆ ಎಂದು ನಮ್ಮ ನೀರನ್ನು ಬೇರೆ ಬೇರೆ ಕಡೆೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಇದರಿಂದ ನಮ್ಮ ರೈತರಿಗೆ ವಂಚನೆಯಾಗುತ್ತಿದೆ ಎಂದರು.

ಭದ್ರಾ ಮೇಲ್ದಂಡೆ ಯೋಜನೆಗೆ ನಮ್ಮ ವಿರೋಧವಿದ್ದು, ಇತ್ತೀಚಿಗೆ ಚಿತ್ರದುರ್ಗ ಜಿಲ್ಲಾಧಿಕಾರಿ ಜ. 18 ಕ್ಕೆ ಬಾಗಿನ ಅರ್ಪಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಕೇವಲ ಬಾಗಿನ ಬಿಡುವುದಕ್ಕಾಗಿ ಚಿತ್ರದುರ್ಗಕ್ಕೆ ನೀರು ಹರಿಸಲಾಗುತ್ತಿದೆ. ಅಪ್ಪರ್ ಭದ್ರಾ ಗೆ ನೀರು ಹರಿಸಿದರೆ ನಮ್ಮ ರೈತರಿಗೆ ತೊಂದರೆಯಾಗಲಿದೆ. ಈ ಬಗ್ಗೆ ಭದ್ರಾ ಕಾಡಾ ಎಂಡಿ ಗಮನಹರಿಸುತ್ತಿಲ್ಲ ಎಂದರು.

ಪಕ್ಷಾತೀತವಾಗಿ ಶಾಸಕರೂ ಸಹ ಗಮನಹರಿಸಬೇಕು. ಕಳೆದ ಡಿಸೆಂಬರ್ ತಿಂಗಳಿನಿಂದ ಚಿತ್ರದುರ್ಗಕ್ಕೆ ಹರಿಸಲಾಗುತ್ತಿದೆ. ನೀರು ನಮಗೆ ಈಗೀನ ಬೆಳೆಗೆ 30 ಟಿಎಂಸಿ ಕೊಡಬೇಕು. 64 ರಲ್ಲಿ 24 ಟಿಎಂಸಿ ನೀರು ಎಲ್ಲಾ ಭಾಗಕ್ಕೂ ಹರಿಸಲಾಗುತ್ತಿದೆ. ಈ ಬಗ್ಗೆ ಗಂಭಿರ ಚಿಂತನೆ ಅಗತ್ಯ. ಈ ಕೂಡಲೇ ಅಪ್ಪರ್ ಭದ್ರಾಗೆ ನೀರು ಹರಿಸುವುದನ್ನು ನಿಲ್ಲಿಸಬೇಕು. ತುಂಗಾದಿಂದ ಲಿಫ್ಟ್‌ ಮಾಡಿದಾಗ ಮಾತ್ರ ನೀರು ಹರಿಸಬೇಕು. ಮಧ್ಯದಲ್ಲಿ ನೀರು ಹರಿಸುವುದನ್ನು ನಿಲ್ಲಿಸಬೇಕೆಂದರು.

ಪತ್ರಿಕಾಗೋಷ್ಠಿಯಲ್ಲಿ ಕೊಂಡಜ್ಜಿ ನಾಗರಾಜರಾವ್, ಶಿರಮಗೊಂಡನಹಳ್ಳಿ ಎ.ಎಂ.ಮಂಜುನಾಥ್‌, ಬೆಳವನೂರು ವಿಶ್ವನಾಥ್ ಉಪಸ್ಥಿತರಿದ್ದರು.

error: Content is protected !!