ಪಾಲಿಕೆಯ ನಿವೃತ್ತ ನೌಕರರಿಗೆ 2 ವರ್ಷದ ಅರ್ಹತಾದಾಯಕ ಬಡ್ತಿ ನೀಡಲು ಒತ್ತಾಯ

ದಾವಣಗೆರೆ, ಜ.6- ಮಹಾನಗರ ಪಾಲಿಕೆಯಲ್ಲಿ ದಿನಗೂಲಿಯಾಗಿ 10 ವರ್ಷ ಸೇವೆ ಸಲ್ಲಿಸಿ ಸಕ್ರಮಗೊಂಡು ನಿವೃತ್ತಿ ಹೊಂದಿದ ಪಿಂಚಣಿದಾರರಿಗೆ 2 ವರ್ಷದ ಅರ್ಹತಾದಾಯಕ ಬಡ್ತಿ ನೀಡಬೇಕೆಂದು ಪಾಲಿಕೆಯ ನಿವೃತ್ತ ನೌಕರರ ಸಂಘವು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದೆ.

ದಿನಗೂಲಿಯಾಗಿ ಸಕ್ರಮಗೊಂಡು ನಿವೃತ್ತಿ ಹೊಂದಿದ ಪಿಂಚಣಿದಾರರಿಗೆ 2 ವರ್ಷದ ಅರ್ಹತಾದಾಯಕ ಬಡ್ತಿಯನ್ನು ಮಂಜೂರು ಮಾಡಿದ್ದು, 2019ರಲ್ಲಿ ಈ ಆದೇಶವನ್ನು ರದ್ದು ಪಡಿಸಿದ್ದಾರೆ. ಇದ ರಿಂದ ನಿವೃತ್ತ ನೌಕರರಿಗೆ ಅನ್ಯಾಯವಾಗಿದೆ.

ಈ ನಿವೃತ್ತ  ನೌಕರರು 15ರಿಂದ 20 ವರ್ಷ ಸೇವೆ ಸಲ್ಲಿಸಿ ನಿವೃತ್ತಿಯಾಗಿದ್ದರಿಂದ ಪ್ರಸಕ್ತ 10ರಿಂದ 15 ಸಾವಿರ ರೂ.ಗಳ ಪಿಂಚಣಿ ಪಡೆಯುತ್ತಿದ್ದು, ಇದರಲ್ಲೇ ಜೀವನ ಸಾಗಿಸಲು ಬಲು ಕಷ್ಟವಾಗುತ್ತಿದೆ.

ಕೆಸಿಎಸ್ಆರ್ ನಿಯಮ 247ಎ ರಲ್ಲಿ ತಿಳಿಸಿದ ಪ್ರಕಾರ ಈ ಸೌಲಭ್ಯವನ್ನು ಸರ್ಕಾರಿ ನೌಕರರಿಗೆ ನೀಡಿದ್ದು, ಅದರ ಪ್ರಕಾರ ಪಾಲಿಕೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯಾಗಿರುವ ನೌಕರರಿಗೆ 247ಎ ಯನ್ನು ಯಥಾವತ್ತಾಗಿ ಜಾರಿ ಮಾಡಬೇಕೆಂದು ಆಗ್ರಹಿಸಿದೆ.

ರಾಜ್ಯ ಸರ್ಕಾರ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಅಲ್ಪಸಂಖ್ಯಾಂತರು ಮತ್ತು ಹಿಂದುಳಿದ ವರ್ಗದವರ ಅಭಿವೃದ್ಧಿಗೆ ನಿರಂತರವಾಗಿ ಶ್ರಮಿಸುತ್ತಿದ್ದು, ಈ ಎಲ್ಲ ವರ್ಗದ ಜನರೇ ಪಾಲಿಕೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುತ್ತಾರೆ. ಹಾಗಾಗಿ ಕೆ.ಸಿ.ಎಸ್.ಆರ್ ನಿಯಮ 247ಎ ಯನ್ನು ಯಥಾವತ್ತಾಗಿ ಮಹಾನಗರ ಪಾಲಿಕೆಯ ನಿವೃತ್ತ ನೌಕರರಿಗೂ ಅನ್ವಯಿಸುವಂತೆ ಆದೇಶಿಸಬೇಕೆಂದು ಮನವಿ ಮಾಡಿದ್ದಾರೆ.

error: Content is protected !!