ದಾವಣಗೆೆರೆ, ಜ. 3- ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಪ್ರಿಯಾಂಕ್ ಖರ್ಗೆ ವಿರುದ್ಧ ಕೇವಲ ರಾಜಕೀಯ ದ್ವೇಷದಿಂದ ಆರೋಪ ಮಾಡಲಾಗುತ್ತಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಡಿ. ಬಸವರಾಜ್ ದೂರಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಚಿನ್ ಆತ್ಮಹತ್ಯೆ ಪ್ರಕರಣದಲ್ಲಿ ಪ್ರಿಯಾಂಕ್ ಖರ್ಗೆ ಅವರ ಯಾವುದೇ ಪಾತ್ರ ಇಲ್ಲ. ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಬರೆದಿರುವ ಡೆತ್ ನೋಟ್ನಲ್ಲೂ ಹೆಸರಿಲ್ಲ. ಆದರೂ ಅವರು ದಲಿತರು ಎಂಬ ಕಾರಣಕ್ಕಾಗಿ ಪ್ರಿಯಾಂಕ್ ಖರ್ಗೆಯವರ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.
ವಾಸ್ತವವಾಗಿ ಆತ್ಮಹತ್ಯೆ ಮಾಡಿಕೊಂಡಿರುವ ಸಚಿನ್ ಗುತ್ತಿಗೆದಾರರೇ ಅಲ್ಲ. ಉತ್ತರ ಕಾರ್ನಾಟಕ ಭಾಗದವರು ಗುತ್ತಿಗೆದಾರರಾಗಲು ಧಾರವಾಡದಲ್ಲಿನ ಲೋಕೋಪಯೋಗಿ, ಪಂಚಾಯತ್ ರಾಜ್ ಇಲಾಖೆಯ ಮುಖ್ಯ ಅಧೀಕ್ಷಕರ ಕಚೇರಿಯಲ್ಲಿ ನೋಂದಣಿ ಮಾಡಿಸಬೇಕು. ಸಚಿನ್ ಎಲ್ಲಿಯೂ ನೋಂದಣಿ ಮಾಡಿಸಿಲ್ಲ. ಹಾಗಾಗಿ ಅವರು ಗುತ್ತಿಗೆದಾರ ಅಲ್ಲ ಎಂಬುದು ಗೊತ್ತಾಗಿದೆ ಎಂದರು.
ರಾಜ್ಯದಲ್ಲಿ ಏನೇ ಪ್ರಕರಣ ನಡೆದರೂ ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಬಿಜೆಪಿಯವರು ಹೋರಾಟ ಮಾಡುತ್ತಾರೆ. ಸಿಬಿಐನವರು ಏನಾದರೂ ಬಿಜೆಪಿ ಬಂಧುಗಳಾ ಎಂದು ಲೇವಡಿ ಮಾಡಿದರು. ಬಿಜೆಪಿ ಒಂಭತ್ತು ವರ್ಷಗಳ ಕಾಲ ರಾಜ್ಯದಲ್ಲಿ ಅಧಿಕಾರ ನಡೆಸಿದರೂ ಒಂದೇ ಒಂದು ಪ್ರಕರಣವನ್ನು ಸಿಬಿಐಗೆ ವಹಿಸಿಲ್ಲ ಎಂದು ದೂರಿದರು.
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ವಿರುದ್ಧ ಉಚ್ಛ ನ್ಯಾಯಾಲಯದಲ್ಲಿ ಪೋಕ್ಸೋ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಮುಂದುವರಿಯುತ್ತಿದ್ದಾರೆ. ವಿಜಯೇಂದ್ರ ಮತ್ತು ಯತ್ನಾಳ್ ನಡುವೆ ನಡೆಯುತ್ತಿರುವ ಮುಸುಕಿನ ಗುದ್ದಾಟ ಮುಚ್ಚಿ ಹಾಕಲು ಪ್ರಿಯಾಂಕ ಖರ್ಗೆಯವರ ಮುಖಕ್ಕೆ ಮಸಿ ಬಳಿಯುವ ಷಡ್ಯಂತ್ರ ಮಾಡುತ್ತಿದ್ದಾರೆ. ಪ್ರಿಯಾಂಕ್ ಖರ್ಗೆಯವರು ಯಾವುದೇ ಕಾರಣಕ್ಕೂ ರಾಜೀನಾಮೆ ನೀಡಬಾರದು. ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜೀನಾಮೆ ಸ್ವೀಕರಿಸಬಾರದು ಎಂದು ಒತ್ತಾಯಿಸಿದರು.
ಬಿಜೆಪಿಯವರಿಗೆ ದಲಿತರು ಎಂದರೆ ಆಗುವುದೇ ಇಲ್ಲ. ಹಾಗಾಗಿ ಪ್ರಿಯಾಂಕ ಖರ್ಗೆಯವರ ವಿರುದ್ಧ ಹೋರಾಡಲು ಬಿಜೆಪಿಯವರು ಟೂಲ್ ಕಿಟ್ ಸಿದ್ಧಪಡಿಸಿದ್ದಾರೆ. ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಿಯಾಂಕ್ ಖರ್ಗೆ ರಾಜೀನಾಮೆ ಕೊಡುವ ಅಗತ್ಯವೇ ಇಲ್ಲ. ರಾಜೀನಾಮೆ ನೀಡದೆ ಮುಂದುವರಿಯಬೇಕೆಂದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ಎಂ. ಮಂಜುನಾಥ್, ಲಿಯಾಖತ್ ಅಲಿ, ಗುರು ರೇವಣಕರ್, ಪ್ರಭಾಕರ್, ಬಿ.ಹೆಚ್. ಉದಯ್ ಕುಮಾರ್, ಡಿ. ಶಿವಕುಮಾರ್ ಇತರರು ಉಪಸ್ಥಿತರಿದ್ದರು.