ಸಾರಿಗೆ ನೌಕರರಿಂದ ನಾಳೆ ಅನಿರ್ದಿಷ್ಟಾವಧಿ ಮುಷ್ಕರ

ದಾವಣಗೆರೆ, ಡಿ. 29 – ರಾಜ್ಯದ ನಾಲ್ಕೂ ಸಾರಿಗೆ ನಿಗಮಗಳ ನೌಕರರ ವೇತನ ಪರಿಷ್ಕರಣೆ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ನಾಡಿದ್ದು ದಿನಾಂಕ 31 ರಂದು ಬೆಳಿಗ್ಗೆ 6 ಗಂಟೆಯಿಂದ ರಾಜ್ಯಾದ್ಯಂತ ಅನಿರ್ದಿಷ್ಟಾವಧಿಯ ಮುಷ್ಕರಕ್ಕೆ ಕರೆ ನೀಡಲಾಗಿದೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಸಮಿತಿ ದಾವಣಗೆೆರೆ ವಿಭಾಗದ ಅಧ್ಯಕ್ಷ ಹೆಚ್.ಜಿ. ಉಮೇಶ್ ಆವರಗೆರೆ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಗಳ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿಯು ಕಳೆದ 2024 ರ ಜನವರಿ 25 ರಂದು ಸಾರಿಗೆ ನಿಗಮಗಳ ಸಮಸ್ತ ನೌಕರರ ಪರವಾಗಿ ಬೇಡಿಕೆಗಳ ಪಟ್ಟಿಯನ್ನು ಸಾರಿಗೆ ನಿಗಮಗಳ ಆಡಳಿತ ವರ್ಗ ಹಾಗೂ ರಾಜ್ಯ ಸರ್ಕಾರಕ್ಕೆ ಸಲ್ಲಿಸಿತ್ತು. ನಂತರ ಹಲವಾರು ಬಾರಿ ಆಡಳಿತ ವರ್ಗ ಮತ್ತು ಸಾರಿಗೆ ಸಚಿವರಿಗೆ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯ ಮಾಡಿದೆ ಎಂದು ಹೇಳಿದರು.

ಸಾರಿಗೆ ನೌಕರರ ಬೇಡಿಕೆಗಳ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರಿಗೆ ಈಗಾಗಲೇ ಹಲವಾರು ಪತ್ರಗಳನ್ನು ಬರೆಯಲಾಗಿದೆ. ಆದರೂ ಇದುವರೆಗೂ ಸರ್ಕಾರದಿಂದಾಗಲೀ ಆಡಳಿತ ಮಂಡಳಿಯಿಂದಾಗಲಿ ಸ್ಪಂದನೆ ಇಲ್ಲ. ಇದು ಕಾರ್ಮಿಕರಿಗೆ ಅತೀವ ನಿರಾಶೆ ಮೂಡಿಸಿದೆ ಎಂದರು.

ಸರ್ಕಾರ ಕೂಡಲೇ ಮೂಲ ವೇತನದ ಶೇ. 25 ರಷ್ಟು ಹೆಚ್ಚಳ ಮಾಡಿ, ವೇತನ ಶ್ರೇಣಿಗಳನ್ನು ಸಿದ್ಧಪಡಿಸಬೇಕು. ಶೇ. 15 ವೇತನ ಹೆಚ್ಚಳದ 38 ತಿಂಗಳ ಬಾಕಿ ಹಣ ವಿಳಂಬವಿಲ್ಲದೆ ಪಾವತಿಸಬೇಕು. ವಾರ್ಷಿಕ ವೇತನ ಬಡ್ತಿ ಹಾಗೂ ಉನ್ನತ ಶ್ರೇಣಿಗಳ ವಾರ್ಷಿಕ ವೇತನ ಬಡ್ತಿಯೂ ಆಯಾಯ ವೇತನ ಶ್ರೇಣಿಯ ಮೂಲ ವೇತನದ ಶೇ. 4 ರಷ್ಟು ನೀಡಬೇಕು. ಆಯ್ಕೆ ಶ್ರೇಣಿ ಬಡ್ತಿಯನ್ನು ಸೇವಾ ಅವಧಿಯ ಪ್ರತಿ 10 ವರ್ಷಕ್ಕೆ ಒಮ್ಮೆ ನೀಡಬೇಕು ಎಂದು ಒತ್ತಾಯಿಸಿದರು.

ಶಕ್ತಿ ಯೋಜನೆಯ ಸಂಪೂರ್ಣ ಅನುದಾನವನ್ನು ರಾಜ್ಯ ನಾಲ್ಕೂ ಸಾರಿಗೆ ನಿಗಮಗಳಿಗೆ ಕೂಡಲೇ ಪಾವತಿಸಬೇಕು. ನೌಕರರು ಪಡೆಯುತ್ತಿರುವ  ವಿವಿಧ ಭತ್ಯೆಗಳನ್ನು ಐದು ಪಟ್ಟು ಹೆಚ್ಚಳ ಮಾಡಬೇಕು. ಎಲ್ಲಾ ನೌಕರರಿಗೆ ಪ್ರತಿ ತಿಂಗಳು ಹೊರ ರೋಗಿ ಚಿಕಿತ್ಸಾ ವೆಚ್ಚಕ್ಕಾಗಿ ಎರಡು ಸಾವಿರ ನೀಡಬೇಕು. 

ನೌಕರರಿಂದ ಶೇ. 5 ವಂತಿಗೆ ಸಂಗ್ರಹಿಸಿ ಟ್ರಸ್ಟ್ ರಚಿಸಿ ಈ ಮೂಲಕ ಸಾರಿಗೆ ನೌಕರರಿಗೆ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ನೀಡುವಂತೆ ಯೋಜನೆ ರೂಪಿಸಬೇಕೆಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸಮಿತಿ ಪದಾಧಿಕಾರಿಗಳಾದ ಮಿರ್ಜಾ ರಹಮತ್‌ವುಲ್ಲಾ, ಕೆ. ಜಯಣ್ಣ, ಆರೀಫ್ ಬಾಷಾ ಮತ್ತಿತರರು ಉಪಸ್ಥಿತರಿದ್ದರು. 

error: Content is protected !!