ನಗರದಲ್ಲಿ ಇಂದು ರಾಜ್ಯಮಟ್ಟದ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಕಲೋತ್ಸವ

ದಾವಣಗೆರೆ, ಡಿ. 18- ಕರ್ನಾಟಕ ರಾಜ್ಯ ಅಲೆಮಾರಿ ಮತ್ತು ಅರೆ ಅಲೆಮಾರಿ ಜನಾಂಗಗಳ ಒಕ್ಕೂಟದಿಂದ ನಾಳೆ ದಿನಾಂಕ 19 ರ  ಗುರುವಾರ ಸಂಜೆ 5.30 ಕ್ಕೆ ನಗರದ ಕುವೆಂಪು ಕನ್ನಡ ಭವನದಲ್ಲಿ ರಾಜ್ಯಮಟ್ಟದ ಅಲೆಮಾರಿ ಮತ್ತು ಅರೆ ಅಲೆಮಾರಿ ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವ, ಪ್ರತಿಭಾ ಪುರಸ್ಕಾರ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದು ಒಕ್ಕೂಟದ ಗೌರವಾಧ್ಯಕ್ಷ ಕೆ. ರವೀಂದ್ರ ಶೆಟ್ಟಿ ಉಳಿದೊಟ್ಟು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಒಕ್ಕೂಟ ಸ್ಥಾಪನೆಯಾಗಿ ನಾಲ್ಕು ವರ್ಷಗಳು ಸಂದಿವೆ. ಇದರ ಸವಿನೆನಪಿಗಾಗಿ ಒಕ್ಕೂಟದ ವತಿಯಿಂದ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಸಾಹಿತ್ಯ, ಸಾಂಸ್ಕೃತಿಕ ಕಲೋತ್ಸವ, ಪ್ರತಿಭಾ ಪುರಸ್ಕಾರ, ಸಾಧಕರಿಗೆ ಸನ್ಮಾನ ಹಾಗೂ ವಿಚಾರಗೋಷ್ಠಿ ಹಮ್ಮಿಕೊಳ್ಳಲಾಗಿದೆ ಎಂದರು.ಇದೇ ವೇಳೆ ಅಲೆಮಾರಿ ಜನರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಸಮಾರಂಭದಲ್ಲಿ ಚರ್ಚಿಸಿ, ನಿರ್ಣಯ ಮಂಡಿಸಿ, ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ಹೇಳಿದರು.

ಅಲೆಮಾರಿ, ಅರೆ ಅಲೆಮಾರಿ (ಹಿಂದುಳಿದ ವರ್ಗಗಳ ಪ್ರವರ್ಗ-1) ಜನರ ಸರ್ವತೋಮುಖ ಅಭಿವೃದ್ಧಿಯ ಹಿತದೃಷ್ಟಿಯಿಂದ ನಾವುಗಳು ಸೇರಿ ಹುಟ್ಟಿ ಹಾಕಿರುವ ಸಂಸ್ಥೆ ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಒಕ್ಕೂಟ ಇದೀಗ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ ಎಂದು ತಿಳಿಸಿದರು.

ಈಗಾಗಲೇ ಈ ಒಕ್ಕೂಟ ಅತ್ಯಂತ ಕ್ರಿಯಾಶೀಲವಾಗಿದ್ದು, ಒಕ್ಕೂಟದಲ್ಲಿ 46 ಜಾತಿಗಳಿಗೆ ಪ್ರಾಮುಖ್ಯತೆ ನೀಡಿ, ಬಹುತೇಕ ಜಿಲ್ಲೆಗಳ ಪದಾಧಿಕಾರಿಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ. ಒಕ್ಕೂಟದ ವತಿಯಿಂದ ಈಗಾಗಲೇ ಅಲೆಮಾರಿ, ಅರೆ ಅಲೆಮಾರಿ ಜನಾಂಗಗಳ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಹಾಗೂ ಸರ್ಕಾರಕ್ಕೆ ಮತ್ತು ಸಂಬಂಧಪಟ್ಟ ಸಚಿವರುಗಳಿಗೆ ಮನವಿ ಮಾಡಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿಗಳಾದ ಪ್ರತಾಪ್ ಜೋಗಿ, ವೀರೇಶ್, ಡಿ.ಏಕಾಂತಪ್ಪ, ಎಸ್.ಜಿ.ಬಕ್ಕೇಶ್, ನಾಗರಾಜ್ ಗೋಗೆರೆ, ಕೆ.ಹನುಮಂತಪ್ಪ, ಕಾಟಪ್ಪ, ಡಿ.ಎಂ. ಸಣ್ಣ ಕ್ಯಾತಪ್ಪ, ಪ್ರಕಾಶ್ ರಾಜ್ ಶಿಂಧೆ ಉಪಸ್ಥಿತರಿದ್ದರು 

error: Content is protected !!