ಘಟನೆ ಸಮಗ್ರ ತನಿಖೆಗೆ ಪಂಚಮಸಾಲಿ ಜಗದ್ಗುರು ವಚನಾನಂದ ಸ್ವಾಮೀಜಿ ಒತ್ತಾಯ
ಸಮುದಾಯಕ್ಕೆ ಸಂಬಂಧಿಸಿದ ಯಾವುದೇ ಹೋರಾಟವೇ ಆಗಲೀ ರಾಜಕೀಯೇತರವಾಗಿರಬೇಕು. ರಾಜಕೀಯ ಬೇಳೆ ಬೇಯಿಸಿಕೊಳ್ಳಲು ವೇದಿಕೆ ಆಗಬಾರದು.
– ವಚನಾನಂದ ಸ್ವಾಮೀಜಿ
ದಾವಣಗೆರೆ, ಡಿ.11- ಬೆಳಗಾವಿ ಘಟನೆಯಿಂದ ಇಡೀ ಪಂಚಮಸಾಲಿ ಸಮಾಜಕ್ಕೆ ಅಪಾರ ನೋವಾಗಿದೆ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ವಚನಾನಂದ ಸ್ವಾಮೀಜಿ ತಿಳಿಸಿದರು.
ಬುಧವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿಗಳು ಸಾತ್ವಿಕರು. ಸರ್ಕಾರಕ್ಕೆ ಕೆಟ್ಟ ಹೆಸರು ತರಲಿಕ್ಕೆ ಬಂದವರಲ್ಲ. ನ್ಯಾಯಯುತ ಬೇಡಿಕೆ ಈಡೇರಿಸುವಂತೆ ಒತ್ತಾಯ ಮಾಡಲು ಬಂದವರು. ಅಂತಹವರ ಮೇಲೆ ಲಾಠಿ ಚಾರ್ಜ್ ನಡೆಸಿರುವುದು ತೀವ್ರ ಖಂಡನೀಯ ಎಂದರು.
ಮಂಗಳವಾರ ಬೆಳಗಾವಿಯಲ್ಲಿ ನಡೆದ ಹೋರಾಟದ ಸಂದರ್ಭದಲ್ಲಿ ಯಾರೋ ಕಿಡಿಗೇಡಿಗಳು ಕಲ್ಲು ತೂರುವ ಮೂಲಕ ಹೋರಾಟದ ದಿಕ್ಕು ತಪ್ಪಿಸುವ ಮತ್ತು ಸಮಾಜಕ್ಕೆ ಕಪ್ಪು ಚುಕ್ಕೆ ತರುವ ಕೆಲಸ ಮಾಡಿದ್ದಾರೆ. ಸರ್ಕಾರ ಇಡೀ ಘಟನೆಯ ಬಗ್ಗೆ ಸಮಗ್ರ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.
ಹೋರಾಟಗಾರರ ವಿರುದ್ಧದ ಎಲ್ಲ ಪ್ರಕರಣ ರದ್ಧುಪಡಿಸಬೇಕು. ಸರ್ಕಾರವೇ ಗಾಯಾಳುಗಳಿಗೆ ಚಿಕಿತ್ಸೆ ವ್ಯವಸ್ಥೆ ಮಾಡಬೇಕು. ಮುಂದೆ ಈ ರೀತಿಯಲ್ಲಿ ಎಲ್ಲಿಯೂ ಆಗದಂತೆ ಸರ್ಕಾರ ಜಾಗ್ರತೆ ವಹಿಸಬೇಕು ಎಂದು ಸ್ವಾಮೀಜಿ ಆಗ್ರಹಿಸಿದರು.
ಸಮಾಜಕ್ಕೆ ಮೀಸಲಾತಿ ಕೊಡಿಸಲು ತಾವು ಸದಾ ಬದ್ಧರಾಗಿದ್ದು, ಕಾನೂನಾತ್ಮಕವಾಗಿ ಹೋರಾಟ ನಡೆಸುತ್ತಲೇ ಇದ್ದೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಸರ್ಕಾರ ಪಂಚಮಸಾಲಿ ಸಮಾಜಕ್ಕೆ ಪ್ರಮಾಣವನ್ನು ಹೆಚ್ಚಿಸಿ ಮೀಸಲಾತಿ ನೀಡಬೇಕು. ಆಗ ಯಾರ ಆಕ್ಷೇಪಣೆಯೂ ಇರುವುದಿಲ್ಲ. ನ್ಯಾಯಾಲಯಕ್ಕೆ ಹೋಗುವುದಿಲ್ಲ. ಹಾಗಾಗಿಯೇ ನಾವು ಹಿಂದೆ ಮೀಸಲಾತಿ ಘೋಷಣೆ ಮಾಡಿದ್ದನ್ನು ಸ್ವಾಗತಿಸಲಿಲ್ಲ. ಈಗಲೂ ಸರ್ಕಾರ ಪ್ರಮಾಣ ಹೆಚ್ಚಳ ಮಾಡುವ ಮೂಲಕ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.
ಸಮಾಜದ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಮಾತನಾಡಿ, ಬೆಳಗಾವಿ ಘಟನೆಯಿಂದ ಇಡೀ ಸಮಾಜಕ್ಕೆ ಬಹಳಷ್ಟು ನೋವಾಗಿದೆ. ಈ ರೀತಿಯ ಘಟನೆ ಆಗಲೇಬಾರದಿತ್ತು. ಬೆಂಗಳೂರಿನಲ್ಲಿ 10 ಲಕ್ಷ ಜನರು ಸೇರಿದಾಗಲೇ ಇಂತಹ ಘಟನೆ ನಡೆದಿರಲಿಲ್ಲ. ಬೆಳಗಾವಿ ಘಟನೆ ಯನ್ನು ನಿಯಂತ್ರಿಸಬಹುದಿತ್ತು. ಇಡೀ ಘಟನೆಯ ಬಗ್ಗೆ ಸರ್ಕಾರ ಸಮಗ್ರ ತನಿಖೆ ನಡೆಸಬೇಕು. ಹೋರಾಟಗಾರರ ವಿರುದ್ದದ ಎಲ್ಲ ಪ್ರಕರಣಗಳನ್ನು ರದ್ಧುಪಡಿಸಬೇಕು ಎಂದು ಒತ್ತಾಯಿಸಿದರು.