ಹೆಚ್. ಆಂಜನೇಯ ಶ್ಲ್ಯಾಘನೆ
ಚಿತ್ರದುರ್ಗ, ಡಿ.10 – ರಾಜ್ಯ ರಾಷ್ಟ್ರ ರಾಜಕಾರಣ ದಲ್ಲಿ ಎಲ್ಲಾ ಅತ್ಯುನ್ನತ ಹುದ್ದೆಗಳನ್ನು ಅಲಂಕರಿಸಿ, ಬೆರಳೆಣಿಕೆಯ ರಾಜಕಾರಣಿಗಳಲ್ಲಿ ಎಸ್.ಕೆ.ಕೃಷ್ಣ ಪ್ರಮುಖರು. ಅವರ ಅಗಲಿಕೆ ನಾಡಿಗೆ ಬಹುದೊಡ್ಡ ನಷ್ಟವನ್ನುಂಟು ಮಾಡಿದೆ ಎಂದು ಮಾಜಿ ಸಚಿವ ಎಚ್.ಆಂಜನೇಯ ಸಂತಾಪ ವ್ಯಕ್ತಪಡಿಸಿದ್ದಾರೆ.
ಇಡೀ ಜಗತ್ತು ಕರ್ನಾಟಕದ ಕಡೆ ತಿರುಗಿ ನೋಡುವ ರೀತಿ ಐಟಿ-ಬಿಟಿ ಮೂಲಕ ಬೆಂಗ ಳೂರನ್ನು ಕಟ್ಟಿದ ರೀತಿ, ಜೊತೆಗೆ ಉದ್ಯೋಗ ಸೃಷ್ಠಿಗೆ ಅಗತ್ಯ ಯೋಜನೆ ರೂಪಿಸಿದ ದೂರ ದೃಷ್ಟಿಯ ರಾಜಕಾರಣಿ. ಅವರು ಬೆಂಗಳೂರನ್ನು ಐಟಿ-ಬಿಟಿ ಹೆಬ್ಬಾಗಿಲಾಗಿಸುವಲ್ಲಿ ಶ್ರಮಿಸಿದ್ದು ವಿಶೇಷ.
ಸೌಮ್ಯ ರಾಜಕಾರಣಿ ಕೃಷ್ಣ ಅಗಲಿಕೆ ತೀವ್ರ ನೋವುಂಟು ಮಾಡಿದ್ದು, ಅತ್ಯುತ್ತಮ ಹಿರಿಯ ಸಂಸದೀಯ ಪಟು ಆಗಿದ್ದರು. ಸಮಾಜವಾದಿ ಹಿನ್ನೆಲೆಯಿಂದ ಬಂದ ಎಸ್.ಎಂ.ಕೃಷ್ಣ, ಇಂದಿರಾ ಗಾಂಧಿ ಅವರ ಜನಪರ ಆಡಳಿತಕ್ಕೆ ಆಕರ್ಷಿತರಾಗಿ ಕಾಂಗ್ರೆಸ್ ಸೇರಿ ಲೋಕಸಭೆ, ವಿಧಾನಸಭೆ ಸದ ಸ್ಯರು, ಸ್ಪೀಕರ್, ಮಂತ್ರಿ, ಮುಖ್ಯಮಂತ್ರಿ, ರಾಜ್ಯ ಪಾಲ, ಕೇಂದ್ರ ಸಚಿವರು ಸೇರಿ ರಾಷ್ಟ್ರದ ಬಹು ತೇಕ ಎಲ್ಲ ಉನ್ನತ ಹುದ್ದೆಗಳನ್ನು ಅಲಂಕರಿಸಿ ಸಮರ್ಥ ವಾಗಿ ನಿಭಾಯಿಸಿದ ಖ್ಯಾತಿ ಅವರಿಗೆ ಸಲ್ಲುತ್ತದೆ.
ಬೆಂಗಳೂರನ್ನು ಐಟಿ-ಬಿಟಿಯ ಹೆಬ್ಬಾಗಿಲು ಮಾಡಿದ ಕೀರ್ತಿ ಜತೆಗೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಬಿಸಿಯೂಟ ಹೀಗೆ ಅನೇಕ ಜನಪರ ಕಾರ್ಯಕ್ರಮಗಳನ್ನು ಕೊಟ್ಟ ಮಹಾನ್ ನಾಯಕ ಕೃಷ್ಣ ಅವರಿಗೆ ಸಲ್ಲುತ್ತದೆ.
ಕೆಂಗಲ್ ಹನುಮಂತಯ್ಯ ವಿಧಾನಸಭೆ ಕಟ್ಟಿದರೆ, ಎಸ್.ಎಂ.ಕೃಷ್ಣ ವಿಕಾಸಸೌಧ ನಿರ್ಮಾಣ ಮಾಡುವ ಮೂಲಕ ದೂರದೃಷ್ಟಿಯ ರಾಜಕಾರಣಿ ಎಂಬುದನ್ನು ತಮ್ಮ ಆಡಳಿತದ ಮೂಲಕ ದೃಢಪಡಿಸಿದ ರಾಜಕಾರಣಿ.
ಕಾಡುಗಳ್ಳ ವೀರಪ್ಪನ್ ನಾಡಿನ ವರನಟ ಡಾ.ರಾಜಕುಮಾರ್ ಅವರನ್ನು ಅಪಹರಣ ಮಾಡಿದ ಸಂದರ್ಭದಲ್ಲಿ ಸವಾಲನ್ನು ಮೆಟ್ಟಿ ನಿಂತು ಕನ್ನಡದ ಕಣ್ಮಣಿಯನ್ನು ನಾಡಿಗೆ ಕರೆ ತಂದಿದ್ದು ಇತಿಹಾಸದ ಪುಟಗಳಲ್ಲಿ ದಾಖಲಾಗುವಂತಹ ಘಟನೆ. ಇಂತಹ ಅಪರೂಪದ ರಾಜಕಾರಣಿಯ ಮಾರ್ಗದರ್ಶನ ನಾಡಿಗೆ ಇನ್ನಷ್ಟು ಕಾಲ ಬೇಕಿತ್ತು ಎಂದು ಆಂಜನೇಯ ಅವರು ತಮ್ಮ ಸಂತಾಪ ವ್ಯಕ್ತಪಡಿಸಿದ್ದಾರೆ.